ನವದೆಹಲಿ: ಕೋಲ್ಕತ್ತಾದಲ್ಲಿ ಟ್ರೇನಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರ ಪ್ರತಿಭಟನೆ 8ನೇ ದಿನವೂ ಮುಂದುವರೆದಿದ್ದು, ದೇಶಾದ್ಯಂತ OPD ಸೇವೆಗಳಲ್ಲಿ ವ್ಯತ್ಯಯವಾದ ಹಿನ್ನಲೆಯಲ್ಲಿ ವೈದ್ಯರು ಆಯ್ದ ರೋಗಿಗಳಿಗೆ OPD ಸೇವೆ ನೀಡಲು ಮುಂದಾಗಿದ್ದಾರೆ.
ಹೌದು.. ಸೋಮವಾರವೂ ಮುಷ್ಕರ ಮುಂದುವರಿಸಿರುವ ವೈದ್ಯರು ಸೋಮವಾರ ಆರೋಗ್ಯ ಸಚಿವಾಲಯದ ಭವನದ ಹೊರಗೆ ಆಯ್ದ ಹೊರರೋಗಿಗಳಿಗೆ ಸೇವೆಗಳನ್ನು ಒದಗಿಸಲು ನಿರ್ಧರಿಸಿದ್ದಾರೆ.
AIIMS RDA ಯ ಹೇಳಿಕೆಯ ಪ್ರಕಾರ ಸೋಮವಾರ ನಿರ್ಮಾಣ ಭವನದ ಹೊರಗಿನ ರೋಗಿಗಳಿಗೆ ಔಷಧಿ, ಶಸ್ತ್ರಚಿಕಿತ್ಸೆ, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ಪೀಡಿಯಾಟ್ರಿಕ್ಸ್, ನೇತ್ರಶಾಸ್ತ್ರ ಮತ್ತು ಮೂಳೆಚಿಕಿತ್ಸೆ ಸೇರಿದಂತೆ ಸುಮಾರು 36 ವಿಶೇಷತೆಗಳಲ್ಲಿ ಒಪಿಡಿ ಸೇವೆಗಳನ್ನು ಒದಗಿಸಲು ವೈದ್ಯರು ಲಭ್ಯವಿರುತ್ತಾರೆ. ಆದರೆ, ಆಸ್ಪತ್ರೆಗಳಲ್ಲಿ ತುರ್ತು ಸೇವೆಗಳು ಮೊದಲಿನಂತೆಯೇ ಮುಂದುವರಿಯಲಿವೆ ಎಂದು ಹೇಳಿದೆ.
ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರ ರಾಜಧಾನಿಯಲ್ಲಿ ವೈದ್ಯರ ಮುಷ್ಕರವು ಭಾನುವಾರ ಒಂದು ವಾರವನ್ನು ಪೂರ್ಣಗೊಳಿಸಿದೆ ಮತ್ತು ಈಗ ಎರಡನೇ ವಾರಕ್ಕೆ ಪ್ರತಿಭಟನೆ ಪ್ರವೇಶಿಸಿದ್ದು, ಇದು ರೋಗಿಗಳಿಗೆ ತೊಂದರೆ ಉಂಟುಮಾಡಿದೆ.
ಭಾನುವಾರ ತಡರಾತ್ರಿ ನಿವಾಸಿ ವೈದ್ಯರು ತಮ್ಮ ಮುಷ್ಕರ ಮುಂದುವರಿಸುವುದಾಗಿ ಘೋಷಿಸಿದ್ದು, ಆರ್‌ಡಿಎಗಳ ಹೇಳಿಕೆಯ ಪ್ರಕಾರ ವೈದ್ಯರು ಬೆಳಿಗ್ಗೆ 11 ಗಂಟೆಗೆ ನಿರ್ಮಾಣ ಭವನಕ್ಕೆ ತೆರಳುತ್ತಾರೆ. ಸಫ್ದರ್‌ಜಂಗ್ ಆಸ್ಪತ್ರೆಯ ನಿವಾಸಿ ವೈದ್ಯರೊಬ್ಬರು, ವೈದ್ಯರಿಗೆ ಕೇಂದ್ರೀಯ ಸಂರಕ್ಷಣಾ ಕಾಯ್ದೆಯನ್ನು ತರುವ ಬಗ್ಗೆ ಸರ್ಕಾರದಿಂದ ಸ್ಪಷ್ಟವಾದ ಪ್ರತಿಕ್ರಿಯೆಯು ಸ್ವಲ್ಪ ಪರಿಹಾರವನ್ನು ನೀಡುತ್ತದೆ ಎಂದು ಹೇಳಿದ್ದಾರೆ.
ಆದರೆ, ಏಳು ದಿನ ಕಳೆದರೂ ಕ್ರಮಕ್ಕಾಗಿ ಇನ್ನೂ ಕಾಯುತ್ತಿದ್ದೇವೆ. ಈ ಹಿಂದೆ ಹೇಳಿದಂತೆ ನಮ್ಮ ಬೇಡಿಕೆಗಳು ಈಡೇರುವವರೆಗೆ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಯಲಿದೆ ಎಂದು ವೈದ್ಯರು ತಿಳಿಸಿದ್ದಾರೆ.