ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ಭಾರೀ ಮಳೆಯ ನಡುವೆ ಶನಿವಾರ ಹೆಲಿಕಾಪ್ಟರ್ ಪತನವಾಗಿದ್ದು, ಪೈಲಟ್ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಈ ಹೆಲಿಕಾಪ್ಟರ್ ಮುಂಬೈನಿಂದ ಹೈದರಾಬಾದ್‌ಗೆ ಹೋಗುತ್ತಿತ್ತು.
ಪ್ರಾಥಮಿಕ ವರದಿಗಳ ಪ್ರಕಾರ, ಎಲ್ಲಾ ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಖಾಸಗಿ ಹೆಲಿಕಾಪ್ಟರ್ ಮುಂಬೈನಿಂದ ಹೈದರಾಬಾದ್‌ಗೆ ತೆರಳುತ್ತಿದ್ದಾಗ ಪುಣೆ ಜಿಲ್ಲೆಯ ಪೌಡ್ ಗ್ರಾಮದ ಬಳಿ ಅಪಘಾತಕ್ಕೀಡಾಗಿದ್ದು ಹೆಲಿಕಾಪ್ಟರ್‌ನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು.
ಪುಣೆ ಗ್ರಾಮಾಂತರ ಪೊಲೀಸ್ ಎಸ್ಪಿ ಪಂಕಜ್ ದೇಶಮುಖ್ ಮಾತನಾಡಿ, ಪೈಲಟ್ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರ ಮೂವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದರು.
ಮಾಹಿತಿ ಪ್ರಕಾರ, AW 139 ಹೆಸರಿನ ಹೆಲಿಕಾಪ್ಟರ್ ಮುಂಬೈನ ಜುಹುದಿಂದ ಹೊರಟು ಹೈದರಾಬಾದ್‌ಗೆ ಹೋಗುತ್ತಿತ್ತು. ನಂತರ ಪೌಡ್ ಪ್ರದೇಶದಲ್ಲಿ ಪತನಗೊಂಡಿದೆ. ಘಟನೆಯಲ್ಲಿ ಕ್ಯಾಪ್ಟನ್ ಆನಂದ್ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹೆಲಿಕಾಪ್ಟರ್ ಅನ್ನು ಗ್ಲೋಬಲ್ ವೆಕ್ಟ್ರಾ ಹೆಲಿಕಾಪ್ಟರ್‌ಗಳನ್ನು ನಿರ್ವಹಿಸುತ್ತಿದ್ದವು.
ಮೇ ತಿಂಗಳಿನಲ್ಲಿ ಶಿವಸೇನೆಯ ಉಪನಾಯಕಿ ಸುಷ್ಮಾ ಅಂಧಾರೆಯವರನ್ನು ಕರೆದುಕೊಂಡು ಬರಲು ಹೊರಟಿದ್ದ ಖಾಸಗಿ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಹಠಾತ್ ಅಪಘಾತಕ್ಕೀಡಾಗಿತ್ತು. ಅಪಘಾತಕ್ಕೂ ಮುನ್ನ ಹೆಲಿಕಾಪ್ಟರ್ ಪೈಲಟ್ ಜಿಗಿದು ಪ್ರಾಣ ಉಳಿಸಿಕೊಂಡಿದ್ದರು. ಭಾರತೀಯ ಹವಾಮಾನ ಇಲಾಖೆ (IMD) ಪಶ್ಚಿಮ ಮಹಾರಾಷ್ಟ್ರದ ಪುಣೆ ಮತ್ತು ಸತಾರಾ ಜಿಲ್ಲೆಗಳಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಿದ್ದು ಆರೆಂಜ್ ಅಲರ್ಟ್ ಘೋಷಿಸಿದೆ.