ಹೈದರಾಬಾದ್: ತಮ್ಮ ಮಾಲೀಕತ್ವದ ಎನ್-ಕನ್ವೆನ್ಷನ್ ಸೆಂಟರ್ ನ್ನು ಹೈದರಾಬಾದ್ ವಿಕೋಪ ಸ್ಪಂದನೆ, ಆಸ್ತಿಗಳ ನಿಗಾ ಹಾಗೂ ರಕ್ಷಣಾ ಏಜೆನ್ಸಿ (ಹೈದ್ರಾ) ಶನಿವಾರ ನೆಲಸಮ ಮಾಡಿರುವುದಕ್ಕೆ ನಟ ನಾಗಾರ್ಜುನ ನೋವು ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ನಾಗಾರ್ಜುನ, ವಿವಾದ ಕೋರ್ಟ್ ನಲ್ಲಿದ್ದರೂ 'ತಡೆಯಾಜ್ಞೆಗಳಿದ್ದರೂ, ನ್ಯಾಯಾಲಯದಲ್ಲಿ ಪ್ರಕರಣ ಮುಂದುವರಿದಿದ್ದರೂ ಎನ್ ಕನ್ವೆನ್ಷನ್ ಸೆಂಟರ್ ಅನ್ನು ಕಾನೂನುಬಾಹಿರ ರೀತಿಯಲ್ಲಿ ಕೆಡವಿರುವುದು ನೋವಾಗಿದೆ. ನನ್ನ ಪ್ರತಿಷ್ಠೆಯನ್ನು ರಕ್ಷಿಸಲು ಮತ್ತು ನಾವು ಕಾನೂನು ಉಲ್ಲಂಘಿಸಿ ಯಾವುದೇ ಕೆಲಸ ಮಾಡಿಲ್ಲ ಎಂಬುದನ್ನು ತಿಳಿಸಿಲು ಈ ಹೇಳಿಕೆ ನೀಡುವುದು ಸೂಕ್ತವೆನಿಸಿತು ಎಂದಿದ್ದಾರೆ.
ಇದು ಪಟ್ಟಾ ಭೂಮಿಯಾಗಿದೆ. ಒಂದು ಇಂಚು ಭೂಮಿಯನ್ನೂ ಅತಿಕ್ರಮಿಸಿಲ್ಲ ಅಥವಾ ಒತ್ತುವರಿ ಮಾಡಿಕೊಂಡಿಲ್ಲ ಎಂದು ಅವರು ಸ್ಪಪಡಿಸಿದ್ದಾರೆ.
ಕಾನೂನುಬಾಹಿರ ಕಟ್ಟಡ ಉರುಳಿಸುವಿಕೆಯ ನೋಟಿಸ್ ವಿರುದ್ಧ ನೀಡಲಾದ ಹಿಂದಿನ ತಡೆಯಾಜ್ಞೆಯನ್ನು ಉಲ್ಲೇಖಿಸಿದ್ದಾರೆ. ಇಂದು ತಪ್ಪು ಮಾಹಿತಿ ಆಧಾರದ ಮೇಲೆ ಕಟ್ಟಡ ಧ್ವಂಸಗೊಳಿಸಲಾಗಿದೆ. ಬೆಳಗ್ಗೆ ಕಟ್ಟಡ ನೆಲಸಮ ಮಾಡುವ ಮೊದಲು ಯಾವುದೇ ನೋಟಿಸ್ ನೀಡಿಲ್ಲ. ಕಾನೂನು ಪಾಲಿಸುವ ನಾಗರಿಕನಾಗಿ ಕೋರ್ಟ್ ನನ್ನ ವಿರುದ್ಧ ಆದೇಶ ನೀಡಿದ್ದರೆ ನಾನೇ ಕಟ್ಟಡ ನೆಲಸಮಗೊಳಿಸುತ್ತಿದ್ದೆ ಎಂದಿದ್ದಾರೆ.
ಅಧಿಕಾರಿಗಳ ತಪ್ಪು ಕ್ರಮಗಳಿಗೆ ಪ್ರತಿಕ್ರಿಯೆಯಾಗಿ ಸೂಕ್ತ ಕಾನೂನು ಪರಿಹಾರಗಳನ್ನು ಹುಡುಕುತ್ತೇನೆ ಎಂದು ನಟ ಬಹಿರಂಗಪಡಿಸಿದ್ದಾರೆ."ನಮ್ಮಿಂದ ತಪ್ಪಾದ ಕಟ್ಟಡ ನಿರ್ಮಾಣ ಅಥವಾ ಅತಿಕ್ರಮಣದ ಬಗ್ಗೆ ಯಾವುದೇ ಸಾರ್ವಜನಿಕ ತಪ್ಪು ಅಭಿಪ್ರಾಯವನ್ನು ಸರಿಪಡಿಸುವ ಉದ್ದೇಶದಿಂದ ದನ್ನು ದಾಖಲೆಯಲ್ಲಿ ಇರಿಸುತ್ತಿದ್ದೇನೆ. ಅಧಿಕಾರಿಗಳು ನಡೆಸಿದ ತಪ್ಪು ಕ್ರಮಗಳಿಗೆ ಸಂಬಂಧಿಸಿದಂತೆ ನಾವು ನ್ಯಾಯಾಲಯದಿಂದ ಸೂಕ್ತ ಪರಿಹಾರವನ್ನು ಪಡೆಯುತ್ತೇವೆ ಎಂದು ಅವರು ಫೋಸ್ಟ್ ಮಾಡಿದ್ದಾರೆ.
ಪೊಲೀಸರೊಂದಿಗೆ ಹೈದ್ರಾ ಇಂದು ಬೆಳಗ್ಗೆ ರಂಗಾರೆಡ್ಡಿ ಜಿಲ್ಲೆಯ ಶಿಲ್ಪರಾಮಂ ಬಳಿಯ ಎನ್ ಕನ್ವೆನ್ಷನ್ ಸೆಂಟರ್ ನೆಲಸಮ ಕಾರ್ಯಾಚರಣೆ ನಡೆಸಿತು. ಈ ಭೂಮಿ ಎಫ್‌ಟಿಎಲ್ ವಲಯಕ್ಕೆ ಬರುವುದರಿಂದ ಸುಗಮವಾಗಿ ಕಟ್ಟಡ ಧ್ವಂಸ ಕಾರ್ಯಾಚರಣೆ ನಡೆಸಲು ಪೊಲೀಸ್ ಪಡೆಯನ್ನು ನಿಯೋಜಿಸಿದ್ದಾಗಿ ಎಂದು ಮಾದಾಪುರ ಡಿಸಿಪಿ ಹೇಳಿದ್ದಾರೆ.