ಇಂಫಾಲ್: ಮಣಿಪುರ ಸರ್ಕಾರವು ಮಂಗಳವಾರ ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ನಿಷೇಧವನ್ನು ಡಿಸೆಂಬರ್ 5 ರವರೆಗೆ, ಅಂದರೆ ಎರಡು ದಿನಗಳವರೆಗೆ ವಿಸ್ತರಣೆ ಮಾಡಿದೆ.
ಇಂಫಾಲ್ ಪಶ್ಚಿಮ, ಇಂಫಾಲ್ ಪೂರ್ವ, ಕಕ್ಚಿಂಗ್, ಬಿಷ್ಣುಪುರ್, ತೌಬಲ್, ಚುರಾಚಂದ್‌ಪುರ, ಕಾಂಗ್‌ಪೋಕ್ಪಿ, ಫೆರ್ಜಾಲ್ ಮತ್ತು ಜಿರಿಬಾಮ್‌ನಲ್ಲಿ ಡಿಸೆಂಬರ್ 5 ರ ಸಂಜೆ 5.15 ರವರೆಗೆ ಮೊಬೈಲ್ ಇಂಟರ್ನೆಟ್ ನಿಷೇಧಿಸಲಾಗಿದೆ ಎಂದು ಗೃಹ ಇಲಾಖೆ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.
"ಚಾಲ್ತಿಯಲ್ಲಿರುವ ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಶೀಲಿಸಿದ ನಂತರ ರಾಜ್ಯ ಸರ್ಕಾರವು ಇಂಫಾಲ್ ಪಶ್ಚಿಮ, ಇಂಫಾಲ್ ಪೂರ್ವ, ಕಕ್ಚಿಂಗ್, ಬಿಷ್ಣುಪುರ್, ತೌಬಲ್, ಚುರಾಚಂದ್‌ಪುರ ಸೇರಿದಂತೆ 9 ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಮತ್ತು ಮೊಬೈಲ್ ಡೇಟಾ ಸೇವೆಗಳ ಅಮಾನತು ಆದೇಶವನ್ನು ಇನ್ನೂ ಎರಡೂ ದಿನಗಳವರೆಗೆ ಮುಂದುವರಿಸಲು ನಿರ್ಧರಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮಣಿಪುರ ಮತ್ತು ಅಸ್ಸಾಂನ ಜಿರಿ ಮತ್ತು ಬರಾಕ್ ನದಿಗಳಲ್ಲಿ ಕ್ರಮವಾಗಿ ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳ ಶವಗಳನ್ನು ಪತ್ತೆಯಾದ ನಂತರ ರಾಜ್ಯದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಕಳೆದ ನವೆಂಬರ್ 16 ರಿಂದ ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಆದಾಗ್ಯೂ, ಸಾಮಾನ್ಯ ಜನರು, ಆರೋಗ್ಯ ಸೌಲಭ್ಯಗಳು, ಶಿಕ್ಷಣ ಸಂಸ್ಥೆಗಳು ಮತ್ತು ಇತರ ಕಚೇರಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಗಣಿಸಿ ಬ್ರಾಡ್‌ಬ್ಯಾಂಡ್ ಸೇವೆಗಳ ಮೇಲಿನ ನಿರ್ಬಂಧವನ್ನು ನವೆಂಬರ್ 19 ರಂದು ತೆಗೆದುಹಾಕಿದೆ.