ನವದೆಹಲಿ: ಕನಿಷ್ಠ ಬೆಂಬಲ ಬೆಲೆಗೆ (MSP) ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸರ್ಕಾರದ ಗಮನ ಸೆಳೆಯಲು 101 ಮಂದಿ ರೈತರ ಗುಂಪು ಇಂದು ಭಾನುವಾರ ಮಧ್ಯಾಹ್ನ 12 ಗಂಟೆಗೆ ಶಂಭು ಗಡಿ ಭಾಗದಿಂದ ದೆಹಲಿಗೆ ತಮ್ಮ ಪಾದಯಾತ್ರೆಯನ್ನು ಪುನರಾರಂಭಿಸಿದೆ.
ಪಂಜಾಬ್‌ನ ಶಂಭು ಗಡಿಯಲ್ಲಿ ಪೊಲೀಸರು ಮತ್ತು ಅರೆಸೇನಾಪಡೆಯನ್ನು ಭಾರೀ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ರೈತರ ಮೆರವಣಿಗೆ ರಾಷ್ಟ್ರ ರಾಜಧಾನಿಯತ್ತ ಸಾಗಲಿದೆ ಎಂದು ರೈತ ಮುಖಂಡ ತೇಜ್ವೀರ್ ಸಿಂಗ್ ಹೇಳಿದ್ದಾರೆ.
ಪಂಜಾಬ್-ಹರಿಯಾಣ ಗಡಿಯಲ್ಲಿ ಭದ್ರತಾ ಸಿಬ್ಬಂದಿ ಹಾರಿಸಿದ ಅಶ್ರುವಾಯು ಶೆಲ್‌ಗಳಿಂದ ಕೆಲವರು ಗಾಯಗೊಂಡ ನಂತರ ಪ್ರತಿಭಟನಾನಿರತ ರೈತರು ಶುಕ್ರವಾರ ರಾಷ್ಟ್ರ ರಾಜಧಾನಿಗೆ ತಮ್ಮ ಮೆರವಣಿಗೆಯನ್ನು ದಿನದ ಮಟ್ಟಿಗೆ ಸ್ಥಗಿತಗೊಳಿಸಿದ್ದರು.
ಕನಿಷ್ಠ ಬೆಂಬಲ ಬೆಲೆಗೆ ಕಾನೂನಾತ್ಮಕ ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ರೈತರು ಒತ್ತಾಯಿಸಿದ್ದಾರೆ. ತಮ್ಮ ಸಮಸ್ಯೆಗಳನ್ನು ಬಗೆಹರಿಸಲು ಮಾತುಕತೆ ನಡೆಸುವಂತೆ ಕೇಂದ್ರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಪಂಜಾಬ್ ರೈತ ನಾಯಕ ಸರ್ವಾನ್ ಸಿಂಗ್ ಪಂಧೇರ್ ಅವರು ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಮಾತುಕತೆಗೆ ಕೇಂದ್ರದಿಂದ ಯಾವುದೇ ಸಂದೇಶ ಬಂದಿಲ್ಲ ಎಂದು ಹೇಳಿದ್ದರು.
ಹರ್ಯಾಣ ಪೊಲೀಸರು ಪಂಜಾಬ್ ಪೊಲೀಸರಿಗೆ ಪತ್ರ ಬರೆದು, ಸುರಕ್ಷತೆಗಾಗಿ ಮಾಧ್ಯಮ ಪ್ರತಿನಿಧಿಗಳನ್ನು ಪ್ರತಿಭಟನಾ ಸ್ಥಳದಿಂದ "ಸುರಕ್ಷಿತ ದೂರ" ದಲ್ಲಿ ನಿಲ್ಲಿಸುವಂತೆ ಮತ್ತು ಕಾನೂನು-ಸುವ್ಯವಸ್ಥೆಯನ್ನು ಕಾಪಾಡುವಂತೆ ಕೇಳಿಕೊಂಡಿದ್ದರು.
ರೈತ ಸಂಘಗಳಾದ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ನೀಡಿದ ಕರೆಯ ಭಾಗವಾಗಿ, 101 ರೈತರ 'ಜಾಥಾ' ಶಂಭು ಗಡಿಯಲ್ಲಿರುವ ತಮ್ಮ ಪ್ರತಿಭಟನಾ ಸ್ಥಳದಿಂದ ದೆಹಲಿಗೆ ತಮ್ಮ ಬೇಡಿಕೆಗಳನ್ನು ಒತ್ತಾಯಿಸಲು ಮೆರವಣಿಗೆಯನ್ನು ಪ್ರಾರಂಭಿಸಿತು.
ನಿಷೇಧಾಜ್ಞೆಯಿಂದ ಹಿಂಜರಿಯದೆ, ರೈತರು ಬ್ಯಾರಿಕೇಡ್‌ಗಳ ಮೂಲಕ ಬಲವಂತವಾಗಿ ಮುನ್ನುಗ್ಗಲು ಪ್ರಯತ್ನಿಸಿದರು ಆದರೆ ಭದ್ರತಾ ಸಿಬ್ಬಂದಿ ಅವರನ್ನು ತಡೆದರು, ಶಂಭು ಗಡಿಭಾಗದಲ್ಲಿ ತಮ್ಮ ಪ್ರತಿಭಟನಾ ಸ್ಥಳಕ್ಕೆ ಮರಳಲು ಒತ್ತಾಯಿಸಲು ಅನೇಕ ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿದರು.