ನವದೆಹಲಿ: ಲೋಕಸಭೆಯಲ್ಲಿ ಮಂಗಳವಾರ ಮಂಡಿಸಲಾದ ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆಯನ್ನು ಪರಿಶೀಲಿಸುವ ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಗೆ ಕಾಂಗ್ರೆಸ್ ಪಕ್ಷ, ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ನಾಮನಿರ್ದೇಶನ ಮಾಡಲಿದೆ.
ಮಸೂದೆಯನ್ನು ಮಂಡಿಸಿದ ನಂತರ ಕೇಂದ್ರ ಸರ್ಕಾರ ಜೆಪಿಸಿಗೆ ಶಿಫಾರಸು ಮಾಡಿದ್ದರೂ, ಸ್ಪೀಕರ್ ಓಂ ಬಿರ್ಲಾ ಅವರು ಅದನ್ನು ಇನ್ನೂ ಅಂತಿಮಗೊಳಿಸಿಲ್ಲ. ಸರ್ಕಾರ ಡಿಸೆಂಬರ್ 20 ರಂದು ಸಂಸತ್ತಿನ ಚಳಿಗಾಲದ ಅಧಿವೇಶನ ಮುಗಿಯುವ ಮೊದಲು ಸಮಿತಿ ಅಂತಿಮಗೊಳಿಸುವ ಸಾಧ್ಯತೆ ಇದೆ.
ಪ್ರಿಯಾಂಕಾ ಗಾಂಧಿ ಅವರಲ್ಲದೆ ಮನೀಶ್ ತಿವಾರಿ, ರಾಜ್ಯಸಭಾ ಸಂಸದರಾದ ಸುಖದೇವ್ ಭಗತ್ ಮತ್ತು ರಣದೀಪ್ ಸುರ್ಜೆವಾಲಾ ಅವರನ್ನು ಕಾಂಗ್ರೆಸ್ ಜೆಪಿಸಿಗೆ ನಾಮನಿರ್ದೇಶನ ಮಾಡಲಿದೆ.
ಸಮಿತಿಯು ಲೋಕಸಭೆಯಿಂದ 21 ಸದಸ್ಯರು ಮತ್ತು ರಾಜ್ಯಸಭೆಯಿಂದ 10 ಸದಸ್ಯರನ್ನು ಒಳಗೊಂಡಿರುತ್ತದೆ.
ತೃಣಮೂಲ ಕಾಂಗ್ರೆಸ್(ಟಿಎಂಸಿ) ಕಲ್ಯಾಣ್ ಬ್ಯಾನರ್ಜಿ ಅವರನ್ನು ಜೆಪಿಸಿಗೆ ನಾಮನಿರ್ದೇಶನ ಮಾಡುತ್ತದೆ ಮತ್ತು ಡಿಎಂಕೆಯಿಂದ ಪಿ ವಿಲ್ಸನ್ ಹಾಗೂ ಸಮಾಜವಾದಿ ಪಕ್ಷದಿಂದ(ಎಸ್‌ಪಿ) ಧರ್ಮೇಂದ್ರ ಯಾದವ್ ಅವರು ಸಮಿತಿಯ ಭಾಗವಾಗಲಿದ್ದಾರೆ ಎಂದು ತಿಳಿದುಬಂದಿದೆ.
ಸಂವಿಧಾನ(129 ನೇ ತಿದ್ದುಪಡಿ) ಮಸೂದೆಯನ್ನು ಲೋಕಸಭೆಯಲ್ಲಿ ಕಾನೂನು ಸಚಿವ ಅರ್ಜುನ್ ಮೇಘವಾಲ್ ಅವರು ಮಂಗಳವಾರ ಮಂಡಿಸಿದರು. ಸುಮಾರು 90 ನಿಮಿಷಗಳ ಚರ್ಚೆಯ ನಂತರ ಮಸೂದೆಯನ್ನು ಮತಕ್ಕೆ ಹಾಕಲಾಯಿತು. 269 ಸದಸ್ಯರು ಮಸೂದೆಯ ಪರವಾಗಿ ಮತ ಚಲಾಯಿಸಿದರೆ, 198 ಸದಸ್ಯರು ಮಸೂದೆಯ ವಿರುದ್ಧ ಮತ ಚಲಾಯಿಸಿದರು.