ನವದೆಹಲಿ: ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸಲಾಗಿದೆ ಎನ್ನಲಾದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಮಾಡಿದ ಭಾಷಣವನ್ನು ತೆಗೆದುಹಾಕುವಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಾಮಾಜಿಕ ಮಾಧ್ಯಮ ವೇದಿಕೆ 'X' ಗೆ ಸೂಚಿಸಿದ ಇಮೇಲ್ ಅನ್ನು ಉಲ್ಲೇಖಿಸಿ ಕಾಂಗ್ರೆಸ್ ಗುರುವಾರ ಹೇಳಿದೆ.
ಕಾಂಗ್ರೆಸ್ ಆರೋಪದ ಬಗ್ಗೆ ಬಿಜೆಪಿ ಅಥವಾ ಎಕ್ಸ್‌ನಿಂದ ಯಾವುದೇ ಅಧಿಕೃತ ಮಾಹಿತಿ ಇಲ್ಲ.
ಅಮಿತ್ ಶಾ ಅವರು "ಕ್ಷಮಿಸಲಾಗದ ಅಪರಾಧ" ಎಸಗಿದ್ದಾರೆ. ಇದಕ್ಕಾಗಿ ಗೃಹ ಸಚಿವರು ರಾಷ್ಟ್ರದ ಕ್ಷಮೆಯಾಚಿಸಬೇಕು ಮತ್ತು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ವಕ್ತಾರೆ ಮತ್ತು ಸಾಮಾಜಿಕ ಮಾಧ್ಯಮ, ಡಿಜಿಟಲ್ ವೇದಿಕೆಗಳ ಅಧ್ಯಕ್ಷೆ ಸುಪ್ರಿಯಾ ಶ್ರಿನೇಟ್ ಅವರು, ಕಾಂಗ್ರೆಸ್ ನಾಯಕರು, ಅದರ ಸಂಸದರು ಮತ್ತು ಪಕ್ಷದ ಅಧಿಕೃತ ಹ್ಯಾಂಡಲ್‌ಗೆ ತಾವು ಸೇರಿದಂತೆ 'ಎಕ್ಸ್' ನಿಂದ ಇಮೇಲ್ ಬಂದಿದ್ದು, ತಾವು ಹಂಚಿಕೊಂಡ ಅಮಿತ್ ಶಾ ಅವರ ಭಾಷಣ ಡಿಲೀಟ್ ಮಾಡುವಂತೆ ಭಾರತ ಸರ್ಕಾರ ಸೂಚಿಸಿರುವುದಾಗಿ ತಿಳಿಸಲಾಗಿದೆ ಎಂದರು.
ಆದಾಗ್ಯೂ, 'X' ವೇದಿಕೆಯು ವಾಕ್ ಸ್ವಾತಂತ್ರ್ಯದ ದೃಷ್ಟಿಯಿಂದ ಅದನ್ನು ತೆಗೆದು ಹಾಕಲು ನಿರಾಕರಿಸಿದೆ ಎಂದು ಅವರು ಹೇಳಿದ್ದಾರೆ.
ತಮ್ಮ ಭಾಷಣದಲ್ಲಿ ಯಾವುದೇ ತಪ್ಪಿಲ್ಲ ಎಂದು ಅಮಿತ್ ಶಾ ಭಾವಿಸಿದರೆ, ಅದನ್ನು ತೆಗೆದು ಹಾಕಲು ಅವರ ಸಚಿವಾಲಯ 'ಎಕ್ಸ್' ಗೆ ಏಕೆ ಸೂಚಿಸಿದೆ ಎಂದು ಶ್ರಿನೇಟ್ ಪ್ರಶ್ನಿಸಿದ್ದಾರೆ.
ತಾವು ಹಂಚಿಕೊಂಡಿರುವುದು ಅಮಿತ್ ಶಾ ಅವರ ಮೂಲ ಭಾಷಣವಾಗಿದ್ದು, ಅದನ್ನು ಎಡಿಟ್ ಮಾಡಿಲ್ಲ ಅಥವಾ ತಿರುಚಿಲ್ಲ ಎಂದು ಶ್ರೀನೇಟ್ ಸ್ಪಷ್ಟಪಡಿಸಿದ್ದಾರೆ.