ನವದೆಹಲಿ: ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ವಿರುದ್ಧ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಇಂದು ಗುರುವಾರ ವಿಶೇಷ ಹಕ್ಕುಚ್ಯುತಿ ನೊಟೀಸ್ ನ್ನು ರಾಜ್ಯಸಭಾಧ್ಯಕ್ಷರಿಗೆ ಸಲ್ಲಿಸಿದ್ದಾರೆ.
ಅಮಿತ್ ಶಾ ಅವರ ಹೇಳಿಕೆಗಳು ಸಂವಿಧಾನ ಶಿಲ್ಪಿಗೆ ಅವಮಾನವಾಗಿದ್ದು, ಸದನದ ಅವಹೇಳನಕ್ಕೆ ಸಮಾನವಾಗಿದೆ ಮತ್ತು ಸವಲತ್ತು ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಖರ್ಗೆ ರಾಜ್ಯಸಭಾಧ್ಯಕ್ಷರಿಗೆ ನೊಟೀಸ್ ಸಲ್ಲಿಸಿದ್ದಾರೆ.
ರಾಜ್ಯಸಭೆಯ ಕಾರ್ಯವಿಧಾನ ಮತ್ತು ವ್ಯವಹಾರದ ನಿಯಮಗಳ ನಿಯಮ 188 ರ ಅಡಿಯಲ್ಲಿ ಗೃಹ ವ್ಯವಹಾರಗಳ ಸಚಿವರಾದ ಅಮಿತ್ ಶಾ ಅವರ ವಿರುದ್ಧ ವಿಶೇಷ ಹಕ್ಕುಚ್ಯುತಿ ನೋಟಿಸ್ ನ್ನು ನೀಡುತ್ತೇನೆ ಎಂದು ಖರ್ಗೆ ತಿಳಿಸಿದ್ದಾರೆ.
ಅಮಿತ್ ಶಾ ಅವರು ಮೊನ್ನೆ, ಭಾರತದ ಸಂವಿಧಾನದ 75 ವರ್ಷಗಳ ವೈಭವದ ಪಯಣ ಕುರಿತ ಚರ್ಚೆಗೆ ರಾಜ್ಯಸಭೆಯಲ್ಲಿ ಉತ್ತರ ನೀಡುತ್ತಿದ್ದ ವೇಳೆ, ಅಂಬೇಡ್ಕರ್ ಅವರಿಗೆ ಅವಮಾನಕರ ಮತ್ತು ಮಾನಹಾನಿಕರವಾಗುವ ರೀತಿಯಲ್ಲಿ ಹೇಳಿಕೆ ನೀಡಿದ್ದರು. ಸದನ ಸದಸ್ಯರು ಯಾವುದೇ ದುರ್ನಡತೆ ಅಥವಾ ಪ್ರತಿಬಿಂಬಗಳನ್ನು ಬಿತ್ತರಿಸುವುದು ಮತ್ತು ಮಾನಹಾನಿಕರ ಹೇಳಿಕೆಗಳನ್ನು ನೀಡುವುದು ಸವಲತ್ತುಗಳ ಉಲ್ಲಂಘನೆ ಮತ್ತು ಸದನಕ್ಕೆ ತೋರಿಸುವ ಅಗೌರವವಾಗಿದೆ ಎಂದು ಖರ್ಗೆ ಆರೋಪಿಸಿದ್ದಾರೆ.
ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ಬಳಸುವುದು ಡಾ. ಅಂಬೇಡ್ಕರ್ ಅವರಿಗೆ ಸ್ಪಷ್ಟವಾದ ಅವಮಾನವಾಗಿದೆ. ಸದನದೊಳಗೆ ನೀಡಿದ ಹೇಳಿಕೆಗಳು ಸಂಪೂರ್ಣವಾಗಿ ಅವಹೇಳನಕಾರಿಯಾಗಿದೆ. ಅಮಿತ್ ಶಾ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ನನ್ನ ಮೊಣಕಾಲುಗಳಿಗೆ ಗಾಯ: ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರಿಗೆ ಪತ್ರ ಬರೆದಿರುವ ಮಲ್ಲಿಕಾರ್ಜುನ ಖರ್ಗೆ ಅವರು, ಇಂದು ಸಂಸತ್ತು ಆವರಣದಲ್ಲಿ ಬಿಜೆಪಿ ಸಂಸದರು ತಮ್ಮನ್ನು ತಳ್ಳಿದ್ದರಿಂದ ಸಮತೋಲನ ಕಳೆದುಕೊಂಡು ಕೆಳಗೆ ಬಿದ್ದೆ ಇದರಿಂದ ನನ್ನ ಮೊಣಕಾಲಿಗೆ ಪೆಟ್ಟಾಯಿತು ಎಂದಿದ್ದಾರೆ.
ಈ ಬಗ್ಗೆ ತನಿಖೆಗೆ ಆದೇಶಿಸುವಂತೆ ಒತ್ತಾಯಿಸುತ್ತೇನೆ. ಶಸ್ತ್ರಚಿಕಿತ್ಸೆಯಾದ ನನ್ನ ಮೊಣಕಾಲುಗಳಿಗೆ ನೋವಾಗಿದೆ. ಇಂದು ಸಂಸತ್ತಿನ ಮಕರ ದ್ವಾರ ಮುಂದೆ ಪ್ರತಿಭಟನೆ ಮಾಡುತ್ತಿದ್ದಾಗ ತಳ್ಳಿದ್ದರಿಂದ ಸಮತೋಲನ ಕಳೆದುಕೊಂಡೆ. ನಂತರ ಕಾಂಗ್ರೆಸ್ ಸಂಸದರು ನನಗೆ ಕುರ್ಚಿ ತಂದು ನನ್ನನ್ನು ಅದರ ಮೇಲೆ ಕೂರಿಸಿದರು. ಬಹಳ ಕಷ್ಟದಿಂದ ನನ್ನ ಸಹೋದ್ಯೋಗಿಗಳ ಬೆಂಬಲದೊಂದಿಗೆ ನಾನು 11 ಗಂಟೆಗೆ ಸದನಕ್ಕೆ ಕುಂಟುತ್ತಾ ಬಂದೆ ಎಂದಿದ್ದಾರೆ.
ಬಿ ಆರ್ ಅಂಬೇಡ್ಕರ್ ಅವರನ್ನು ಅವಮಾನಿಸಿದ ಆರೋಪದ ಕುರಿತು ಸಂಸತ್ತಿನ ಆವರಣದಲ್ಲಿ ಪ್ರತಿಭಟನೆಯಲ್ಲಿ ಇಂದು ಪ್ರತಿಪಕ್ಷಗಳು ಮತ್ತು ಎನ್‌ಡಿಎ ಸಂಸದರು ಮುಖಾಮುಖಿಯಾಗಿ ಮಾಜಿ ಸಚಿವ ಪ್ರತಾಪ್ ಚಂದ್ರ ಸಾರಂಗಿ ಗಾಯಗೊಂಡ ಬಳಿಕ ಖರ್ಗೆ ಲೋಕಸಭಾಧ್ಯಕ್ಷರಿಗೆ ಪತ್ರ ಬರೆದು ಈ ರೀತಿ ಆರೋಪ ಮಾಡಿದ್ದಾರೆ.
ರಾಹುಲ್ ಗಾಂಧಿ ಬಿಜೆಪಿಯ ಹಿರಿಯ ಸದಸ್ಯರನ್ನು ತಳ್ಳಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ, ಇದನ್ನು ಕಾಂಗ್ರೆಸ್ ನಾಯಕರು ತಿರಸ್ಕರಿಸಿದ್ದಾರೆ. ಮಕರ ದ್ವಾರದ ಮೆಟ್ಟಿಲುಗಳ ಒಂದು ಬದಿಯಲ್ಲಿ ಖಾಲಿ ಉಳಿದಿರುವ ಜಾಗವನ್ನು ಬಳಸುವ ಬದಲು ಬಿಜೆಪಿ ಸಂಸದರ ಮೂಲಕ ಸಂಸತ್ತಿಗೆ ಪ್ರವೇಶಿಸಲು ಇಂಡಿಯಾ ಬ್ಲಾಕ್ ಸದಸ್ಯರು ಒತ್ತಾಯಿಸಿದಾಗ ಸಮಸ್ಯೆ ಆರಂಭವಾಯಿತು.