ನವದೆಹಲಿ: ಭಾರತ ತಂಡದ ದಿಗ್ಗಟ ಆಟಗಾರ ರವಿಚಂದ್ರನ್ ಅಶ್ವಿನ್ ತಮ್ಮ ಸುದೀರ್ಘ 14 ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದಾರೆ.
ಬ್ರಿಸ್ಬೇನ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಡ್ರಾನಲ್ಲಿ ಅಂತ್ಯವಾದ ಬಳಿಕ, ಭಾರತ ತಂಡದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸುವ ಮೂಲಕ ಅಚ್ಚರಿ ಮೂಡಿಸಿದ್ದರು. ಸರಣಿಯಲ್ಲಿ ಇನ್ನೂ ಎರಡು ಪಂದ್ಯ ಬಾಕಿ ಇರುವಾಗಲೇ ವಿದಾಯ ಹೇಳಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಆಘಾತ ತಂದಿತ್ತು.
ಈ ಕುರಿತು ಪತ್ರವೊಂದನ್ನು ಹಂಚಿಕೊಂಡಿರುವ ಪ್ರಧಾನಿ, ಅಶ್ವಿನ್ ಅವರ ಅದ್ಭುತ ವೃತ್ತಿಜೀವನವನ್ನು ಶ್ಲಾಘಿಸಿದ್ದಾರೆ. ತಮ್ಮ ಆಫ್-ಸ್ಪಿನ್ ಮತ್ತು ನವೀನ ಬದಲಾವಣೆಗಳೊಂದಿಗೆ ಬ್ಯಾಟ್ಸ್‌ಮನ್‌ಗಳನ್ನು ಮೀರಿಸುವ ಅವರ ಸಾಮರ್ಥ್ಯವನ್ನು ಕೊಂಡಾಡಿದ್ದಾರೆ. ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ತಾವು ತಂಡಕ್ಕಾಗಿ ಆಡುತ್ತಿದ್ದ ರೀತಿಯನ್ನು ನೆನಪಿಸಿಕೊಂಡ ಮೋದಿ ಅವರು, ಅಶ್ವಿನ್ ಅವರ ಬದ್ಧತೆಯನ್ನು ಶ್ಲಾಘಿಸಿದ್ದಾರೆ. ಅಶ್ವಿನ್ ಅವರ ಐಕಾನಿಕ್ ಜೆರ್ಸಿ ಸಂಖ್ಯೆ 99 ಅನ್ನು ಅಭಿಮಾನಿಗಳು ಮತ್ತು ತಂಡದ ಸಹ ಆಟಗಾರರು ಸಹ ಮಿಸ್ ಮಾಡಿಕೊಳ್ಳುತ್ತಾರೆ ಎಂದಿದ್ದಾರೆ.
38 ವರ್ಷದ ಅಶ್ವಿನ್, ಆರು ಶತಕಗಳು ಸೇರಿದಂತೆ 3,503 ರನ್ ಗಳಿಸುವುದರ ಜೊತೆಗೆ 106 ಟೆಸ್ಟ್ ಪಂದ್ಯಗಳಲ್ಲಿ 537 ವಿಕೆಟ್‌ಗಳನ್ನು ಪಡೆದಿದ್ದಾರೆ. ಏಕದಿನದಲ್ಲಿ 156 ಮತ್ತು ಟಿ20ಯಲ್ಲಿ 72 ವಿಕೆಟ್‌ಗಳನ್ನು ಕಬಳಿಸಿರುವ ದಾಖಲೆ ಅಶ್ವಿನ್ ಹೆಸರಲ್ಲಿದೆ.
ಕೇರಂ ಬಾಲ್ ಸ್ಪೆಷಲಿಸ್ಟ್ ಅಶ್ವಿನ್
ಆರ್ ಅಶ್ವಿನ್ ಅವರು ಕೇರಂ ಬಾಲ್ ಸ್ಪೆಷಲಿಸ್ಟ್ ಎಂದೇ ಗುರುತಿಸಿಕೊಂಡಿದ್ದಾರೆ. 'ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿರುವ ನಿಮ್ಮ ನಿರ್ಧಾರವು ಭಾರತ ಮತ್ತು ಪ್ರಪಂಚದಾದ್ಯಂತ ಇರುವ ಅಭಿಮಾನಿಗಳಿಗೆ ಆಶ್ಚರ್ಯ ಉಂಟುಮಾಡಿದೆ. ಎಲ್ಲರೂ ನಿಮ್ಮಿಂದ ಇನ್ನೂ ಅನೇಕ ಆಫ್-ಬ್ರೇಕ್‌ಗಳಿಗಾಗಿ ಎದುರು ನೋಡುತ್ತಿದ್ದರು. ಇಂತಹ ಸಮಯದಲ್ಲಿ ನೀವು ಕೇರಂ ಬಾಲ್ ಅನ್ನು ಎಸೆಯುವ ಮೂಲಕ ಎಲ್ಲರನ್ನೂ ಆಶ್ಚರ್ಯಕ್ಕೀಡುಮಾಡಿದ್ದೀರಿ' ಎಂದು ಪ್ರಧಾನಿ ಮೋದಿ ಬರೆದಿದ್ದಾರೆ.
ನಿಮ್ಮ ವೃತ್ತಿ ಜೀವನದುದ್ದಕ್ಕೂ ಭಾರತಕ್ಕಾಗಿ ನೀವು ಅಭೂತಪೂರ್ವವಾಗಿ ಆಡಿದ ಬಳಿಕ ನಿವೃತ್ತಿ ಘೋಷಿಸುವ ನಿರ್ಧಾರ ತೆಗೆದುಕೊಳ್ಳುವುದು ನಿಮಗೆ ಕಷ್ಟವಾಗಿತ್ತು ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳುತ್ತಾರೆ. ಭಾರತ ತಂಡದ ಪರ ಸಾಕಷ್ಟು ಪಂದ್ಯಗಳಲ್ಲಿ ಆಡಿ ತಂಡದ ಗೆಲುವಿನಲ್ಲಿ ಪಾತ್ರ ವಹಿಸಿದ್ದೀರಿ ಎಂದು ಮೋದಿ ಕೊಂಡಾಡಿದ್ದಾರೆ.
ಅಶ್ವಿನ್ ಕುಟುಂಬಕ್ಕೆ ಅಭಿನಂದನೆ
ಪ್ರಧಾನಿ ಮೋದಿ ಅವರು ಅಶ್ವಿನ್ ಅವರ ಕುಟುಂಬಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಅವರ ಯಶಸ್ಸಿನಲ್ಲಿ ಅವರ ಪತ್ನಿ ಪ್ರೀತಿ ಮತ್ತು ಅವರ ಇಬ್ಬರು ಮಕ್ಕಳು ಮತ್ತು ಪೋಷಕರು ವಹಿಸಿದ ನಿರ್ಣಾಯಕ ಪಾತ್ರವನ್ನು ಗುರುತಿಸಿದ್ದಾರೆ. ಅಶ್ವಿನ್ ಅವರು ತಮ್ಮ ಪ್ರೀತಿಪಾತ್ರರಿಗೆ ಹೆಚ್ಚಿನ ಸಮಯ ನೀಡುವ ಮೂಲಕ ಮತ್ತು ಆಟಕ್ಕೆ ತಮ್ಮ ಕೊಡುಗೆಗಳನ್ನು ನೀಡುವ ಮೂಲಕ ಭವಿಷ್ಯವನ್ನು ಪೂರೈಸಲಿ ಎಂದು ಪ್ರಧಾನಿ ಹಾರೈಸಿದರು.
ನೀವು ಇಷ್ಟು ವರ್ಷ ಪ್ರೀತಿಸಿರುವ ಆಟಕ್ಕೆ ಇನ್ಮುಂದೆಯೂ ಕೊಡುಗೆ ನೀಡುವುದನ್ನು ಮುಂದುವರಿಸಲು ನೀವು ಹೊಸ ಮಾರ್ಗಗಳನ್ನು ಕಂಡುಕೊಳ್ಳಬಹುದು. ನಿಮ್ಮ ಅತ್ಯುತ್ತಮ ವೃತ್ತಿಜೀವನಕ್ಕೆ ಮತ್ತೊಮ್ಮೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ನಿಮ್ಮ ಮುಂದಿನ ಜೀವನಕ್ಕೆ ಶುಭಾಶಯಗಳು ಎಂದು ಮೋದಿ ತಿಳಿಸಿದ್ದಾರೆ.