ಚಂಡೀಗಢ: ಪಂಜಾಬ್ ಮೊಹಾಲಿಯಲ್ಲಿ ಸಂಭವಿಸಿದ ಭೀಕರ ಕಟ್ಟಡ ಕುಸಿತ ಪ್ರಕರಣಕ್ಕೆ ದುರಂತ ನಡೆದ ಸ್ಥಳದ ಪಕ್ಕದಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ನೆಲ ಅಗೆದದ್ದೇ ಕಾರಣ ಎಂದು ಹೇಳಲಾಗಿದ್ದು, ಘಟನಾ ಸ್ಥಳದಲ್ಲಿ ಮತ್ತೊಂದು ಮೃತದೇಹ ಪತ್ತೆಯಾಗಿದೆ.
ಮೊಹಾಲಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದಿದ್ದು ಈ ದುರಂತದಲ್ಲಿ ಹಿಮಾಚಲ ಪ್ರದೇಶದ 20 ವರ್ಷದ ಯುವತಿ ಸೇರಿದಂತೆ ಇಬ್ಬರು ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಮಂದಿ ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ.
ಮೃತ ಯುವತಿಯನ್ನು ಥಿಯೋಗ್‌ನ ದೃಷ್ಟಿ ವರ್ಮಾ ಎಂದು ಗುರುತಿಸಲಾಗಿದ್ದು, ಅವರನ್ನು ಗಂಭೀರ ಸ್ಥಿತಿಯಲ್ಲಿ ಅವಶೇಷಗಳಿಂದ ರಕ್ಷಿಸಲಾಗಿತ್ತು. ಕೂಡಲೇ ಸೊಹಾನಾ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಗಂಭೀರ ಗಾಯಗೊಂಡಿದ್ದ ಆಕೆ ಸಾವನ್ನಪ್ಪಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಮತ್ತೊಂದು ಮೃತದೇಹವನ್ನು ಸಿಬ್ಬಂದಿ ಹೊರ ತೆಗೆದಿದ್ದು, ಪುರುಷನ ಇದಾಗಿದೆ. ಸಾವಿಗೀಡಾದವರ ಮಾಹಿತಿ ಇನ್ನೂ ಪತ್ತೆಯಾಗಿಲ್ಲ.
ಅಂತೆಯೇ ಕಟ್ಟಡದ ಅವಶೇಷಗಳಡಿಯಲ್ಲಿ ಕನಿಷ್ಠ 10 ಮಂದಿ ಅವಶೇಷಗಳಡಿ ಸಿಲುಕಿದ್ದಾರೆ ಎನ್ನಲಾಗಿದೆ. ಭಾರತೀಯ ಸೇನೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ (ಎನ್‌ಡಿಆರ್‌ಎಫ್) ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.
ಕಟ್ಟಡ ನಿರ್ಮಾಣಕ್ಕಾಗಿ ಭೂಮಿ ಅಗೆಯುವ ವೇಳೆ ದುರಂತ
ಕಟ್ಟಡದ ಪಕ್ಕದಲ್ಲೇ ಮತ್ತೊಂದು ಕಟ್ಟಡ ನಿರ್ಮಾಣಕ್ಕಾಗಿ ಭೂಮಿ ಅಗೆಯಲಾಗುತ್ತಿತ್ತು. ಈ ವೇಳೆ ಕಟ್ಟದ ಬುನಾದಿ ಸಡಿಲಗೊಂಡು ಕಟ್ಟಡ ಕುಸಿದಿದೆ ಎಂದು ಹೇಳಲಾಗಿದೆ. ಇನ್ನು ಕಟ್ಟಡದ ಮಾಲೀಕರಾದ ಪರ್ವಿಂದರ್ ಸಿಂಗ್ ಮತ್ತು ಗಗನ್‌ದೀಪ್ ಸಿಂಗ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 105 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತೀಯ ಸೇನೆ ಕ್ಷಿಪ್ರ ಕಾರ್ಯಾಚರಣೆ
ಇನ್ನು ಕಟ್ಟಡ ಕುಸಿತದಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಭಾರತೀಯ ಸೇನೆಯು ಕ್ಷಿಪ್ರವಾಗಿ ಸ್ಪಂದಿಸಿದ್ದು, 80 ಸೇನಾ ಸಿಬ್ಬಂದಿಗಳ ಇಂಜಿನಿಯರ್ ಟಾಸ್ಕ್ ಫೋರ್ಸ್ ಮತ್ತು ಉಪಕರಣಗಳು ರಾತ್ರಿಯಿಡೀ ಕೆಲಸ ಮಾಡುತ್ತಿವೆ. ಹಾಗೂ ಬದುಕುಳಿದವರನ್ನು ಹುಡುಕುವ ಪ್ರಯತ್ನಗಳನ್ನು ಮುಂದುವರೆಸುತ್ತಿವೆ.