ಹೈದರಾಬಾದ್: ಪುಷ್ಪ 2 ಚಿತ್ರ ಪ್ರದರ್ಶನ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಸಾವನ್ನಪ್ಪಿದ ಮಹಿಳೆ ಕುಟುಂಬಕ್ಕೆ ನಟ ಅಲ್ಲು ಅರ್ಜುನ್ 20 ಕೋಟಿ ರೂ ಪರಿಹಾರ ನೀಡಿ ಕೂಡಲೇ ಸಿಎಂ ರೇವಂತ್ ರೆಡ್ಡಿ ಕ್ಷಮೆ ಕೇಳಬೇಕು ಎಂದು ತೆಲಂಗಾಣ ಸಿನಿಮಾಟೊಗ್ರಫಿ ಸಚಿವ ಕೋಮಟಿರೆಡ್ಡಿ ವೆಂಕಟರೆಡ್ಡಿ ಹೇಳಿದ್ದಾರೆ.
ಡಿಸೆಂಬರ್ 4 ರಂದು ಪುಷ್ಪ 2 ಚಿತ್ರದ ಪ್ರಥಮ ಪ್ರದರ್ಶನದ ಸಂದರ್ಭದಲ್ಲಿ ಸಂಧ್ಯಾ ಥಿಯೇಟರ್‌ನಲ್ಲಿ ಸಂಭವಿಸಿದ ದುರಂತ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಪ್ರಮುಖವಾಗಿ ನಟ ಅಲ್ಲು ಅರ್ಜುನ್ ಸುದ್ದಿಗೋಷ್ಠಿಯಲ್ಲಿ ಹೇಳಿದ ಅಂಶಗಳು ಸುಳ್ಳು ಎಂದು ಹೈದರಾಬಾದ್ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಇದೀಗ ತೆಲಂಗಾಣ ಸಚಿವ ಕೋಮಟಿರೆಡ್ಡಿ ವೆಂಕಟರೆಡ್ಡಿ ಕೂಡ ಅಲ್ಲು ಅರ್ಜುನ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಅಲ್ಲು ಅರ್ಜುನ್ ಸಿಎಂ ರೇವಂತ್ ರೆಡ್ಡಿ ಅವರನ್ನು ಕ್ಷಮೆ ಕೇಳಿ ಸಂತ್ರಸ್ತೆಯ ಕುಟುಂಬಕ್ಕೆ 20 ಕೋಟಿ ರೂ ಪರಿಹಾರ ನೀಡಬೇಕು ಎಂದು ಹೇಳಿದ್ದಾರೆ.
ನಿನ್ನೆ ಸಂತ್ರಸ್ಥೆ ರೇವತಿ ಅವರ ಕುಟುಂಬಸ್ಥರನ್ನು ಭೇಟಿಯಾದ ಸಚಿವ ಸಚಿವ ಕೋಮಟಿರೆಡ್ಡಿ ವೆಂಕಟರೆಡ್ಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದು ಮಾತ್ರವಲ್ಲದೇ ಅವರಿಗೆ ತಮ್ಮ ಸ್ವಂತ ಖಾತೆಯಿಂದ 25 ಲಕ್ಷ ರೂ ಪರಿಹಾರದ ಚೆಕ್ ಕೂಡ ವಿತರಿಸಿದರು. ಅಲ್ಲದೆ ಆಸ್ಪತ್ರೆಯಲ್ಲಿ ಮಗನ ಚಿಕಿತ್ಸೆಗೆ ತೆಲಂಗಾಣ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಭರವಸೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸಿನಿಮಾ ನಟ ಅಲ್ಲು ಅರ್ಜುನ್ ಕೂಡಲೇ ಸಿಎಂ ರೇವಂತ್ ರೆಡ್ಡಿ ಕ್ಷಮೆ ಯಾಚಿಸಬೇಕು. ಅವರ ಇಮೇಜ್ ಡ್ಯಾಮೇಜ್ ಆಗಿದೆ ಎಂದು ಹೇಳುವುದು ತಪ್ಪು. ಆಸ್ಪತ್ರೆಯಲ್ಲಿ ಬಾಲಕನನ್ನು ಭೇಟಿ ಮಾಡಲು ಕಾನೂನು ತಂಡ ಒಪ್ಪಿಲ್ಲ ಎನ್ನುವುದು ಹಾಸ್ಯಾಸ್ಪದ. ಮನುಷ್ಯ ಸತ್ತಾಗ ಯಾವ ಐಕಾನ್ ಸ್ಟಾರ್ ಅಥವಾ ಸೂಪರ್ ಸ್ಟಾರ್ ಆದರೇನು? ಎಂದು ಗರಂ ಆದರು.
ಅಂತೆಯೇ ಈ ಘಟನೆಯನ್ನು ರಾಜಕೀಯಗೊಳಿಸಬಾರದು ಮತ್ತು ಕಾನೂನು ಮತ್ತು ಪೊಲೀಸರು ತಮ್ಮ ಕರ್ತವ್ಯ ಮಾಡಲಿದ್ದಾರೆ. ಈ ಪ್ರಕರಣದಿಂದಾಗಿ ಸರ್ಕಾರ ಮತ್ತು ಚಿತ್ರರಂಗದ ನಡುವೆ ಯಾವುದೇ ಅಂತರ ಏರ್ಪಡುವುದಿಲ್ಲ' ಎಂದು ಸಚಿವ ಕೋಮಟಿರೆಡ್ಡಿ ಸ್ಪಷ್ಟಪಡಿಸಿದರು.
ಅಲ್ಲು ಅರ್ಜುನ್ ರಿಂದಲೇ ಜನಂಸಂದಣಿ
ಅಲ್ಲು ಅರ್ಜುನ್ ಅವರನ್ನು ಥಿಯೇಟರ್‌ಗೆ ಬರದಂತೆ ಕೇಳಲಾಯಿತು. ಆದರೂ ಅವರು ಥಿಯೇಟರ್ ಗೆ ಬಂದಿದ್ದು ಮಾತ್ರವಲ್ಲದೇ ಕಾರಿನ ರೂಫ್ ಟಾಪ್ ಓಪನ್ ಮಾಡಿಕೊಂಡು ರೋಡ್ ಶೋ ಮಾಡಿದ್ದಾರೆ. ಇದು ಭಾರಿ ಜನಸಂದಣಿಗೆ ಕಾರಣವಾಯಿತು. ಇದರ ಪರಿಣಾಮವಾಗಿ ರೇವತಿ ಎಂಬ ತಾಯಿ ಸಾವನ್ನಪ್ಪಿಅವರ ಮಗ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ. ಪೊಲೀಸರು ಈ ಬಗ್ಗೆ ಅಲ್ಲು ಅರ್ಜುನ್‌ಗೆ ತಿಳಿಸಿದಾಗಲೂ ಅವರು ಚಿತ್ರಮಂದಿರದಿಂದ ಹೊರಬರಲು ಮುಂದಾಗಲಿಲ್ಲ. ಇದು ಸಂಪೂರ್ಣವಾಗಿ ಅಜ್ಞಾನ ಮತ್ತು ನಿರ್ಲಕ್ಷ್ಯದ ಕೃತ್ಯ ಎಂದು ಕಿಡಿಕಾರಿದ್ದಾರೆ.
ಸಂತ್ರಸ್ಥೆಯ ಕುಟುಂಬಕ್ಕೆ 20 ಕೋಟಿ ರೂ ಪರಿಹಾರ ನೀಡಿ
ಇದೇ ವೇಳೆ ಸಂತ್ರಸ್ಥೆಯ ಕುಟುಂಬಕ್ಕೆ 1 ಕೋಟಿ ಅಲ್ಲ... 20 ಕೋಟಿ ರೂ ಹಣವನ್ನು ಅಲ್ಲು ಅರ್ಜುನ್ ಪರಿಹಾರವಾಗಿ ನೀಡಬೇಕು ಎಂದು ಅವರು ಆಗ್ರಹಿಸಿದ್ದು, ಅಲ್ಲು ಅರ್ಜುನ್ ಅವರ ಪುಷ್ಪ 2 ಚಿತ್ರ 2000 ಕೋಟಿ ಮತ್ತು 3000 ಕೋಟಿ ಗಳಿಸಿದೆ ಎಂದು ಅವರು ಹೆಮ್ಮೆಯಿಂದ ಹೇಳುತ್ತಿದ್ದಾರೆ. ಹಾಗಾದರೆ ಮೃತರ ಕುಟುಂಬಕ್ಕೆ ಕನಿಷ್ಠ 20 ಕೋಟಿ ರೂ ಏಕೆ ಪಾವತಿಸಲು ಸಾಧ್ಯವಿಲ್ಲ? ಇದು ಅರ್ಜುನ್ ಮತ್ತು ಆ ಚಿತ್ರದ ನಿರ್ಮಾಪಕರಿಗೆ ನನ್ನ ಬೇಡಿಕೆ ಎಂದು ಸಚಿವ ಕೋಮಟಿರೆಡ್ಡಿ ಹೇಳಿದ್ದಾರೆ.