ನವದೆಹಲಿ: ನೂತನ ಸಂಸತ್ ಭವನದ ಎದುರು ಇಂದು ಮಧ್ಯಾಹ್ನ ಹೈಡ್ರಾಮ ನಡೆದಿದೆ. ವ್ಯಕ್ತಿಯೋರ್ವ ಬೆಂಕಿ ಹಚ್ಚಿಕೊಂಡು ಸಂಸತ್ ಭವನದೆಡೆಗೆ ಧಾವಿಸಿದ್ದು ಆತಂಕಕ್ಕೆ ಕಾರಣವಾಗಿತ್ತು.
ಕೂಡಲೇ ಎಚ್ಚೆತ್ತ ರೈಲ್ವೆ ಪೊಲೀಸ್, ಸ್ಥಳೀಯರು ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿ ಹಚ್ಚಿಕೊಂಡಿದ್ದ ವ್ಯಕ್ತಿಯನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಶೇ.95 ರಷ್ಟು ದೇಹ ಸುಟ್ಟುಹೋಗಿದೆ.
ಆತನ ಬಳಿಯಿಂದ ಭಾಗಶಃ ಸುಟ್ಟು ಹೋಗಿರುವ 2 ಪುಟಗಳ ಪತ್ರವೊಂದನ್ನು ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
"ಜಿತೇಂದ್ರ ಅವರ ದೇಹದ ಮೇಲೆ ಶೇಕಡಾ 95 ರಷ್ಟು ಸುಟ್ಟ ಗಾಯಗಳಾಗಿವೆ. ಅವರನ್ನು ಬರ್ನ್ಸ್ ಐಸಿಯುನಲ್ಲಿ ಪ್ರತ್ಯೇಕ ಹಾಸಿಗೆಯಲ್ಲಿ ಇರಿಸಲಾಗಿದೆ. ಪ್ರಸ್ತುತ, ವೈದ್ಯರ ತಂಡ ಅವರಿಗೆ ಚಿಕಿತ್ಸೆ ಕೊಡಿಸುತ್ತಿದೆ" ಎಂದು ಆಸ್ಪತ್ರೆ ತಿಳಿಸಿದೆ.
ಉತ್ತರ ಪ್ರದೇಶದ ಬಾಗ್‌ಪತ್‌ನ ಜಿತೇಂದ್ರ ಎಂದು ಗುರುತಿಸಲಾದ ವ್ಯಕ್ತಿ, ರೈಲ್ವೆ ಭವನದ ಬಳಿಯ ಉದ್ಯಾನವನದಲ್ಲಿ ಬೆಂಕಿ ಹಚ್ಚಿಕೊಂಡು ನಂತರ ಸಂಸತ್ ಭವನದ ಕಡೆಗೆ ಓಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ, ರೈಲ್ವೆ ಭವನ ಸಂಸತ್ತಿನ ಕಟ್ಟಡದ ಎದುರು ಇದೆ.
‘‘ಬಾಗ್‌ಪತ್‌ನಲ್ಲಿ ಮತ್ತೊಂದು ಕುಟುಂಬದ ಜತೆ ಈ ವ್ಯಕ್ತಿಯ ಕುಟುಂಬ ಜಗಳವಾಡಿದ್ದು, ಎರಡೂ ಕಡೆಯ ಜನರು ಜೈಲು ಪಾಲಾಗಿದ್ದರು. ಇದರಿಂದ ಮನನೊಂದ ಜಿತೇಂದ್ರ, ಇಂದು ಬೆಳಗ್ಗೆ ರೈಲಿನಲ್ಲಿ ದೆಹಲಿಗೆ ಬಂದು ರೈಲ್ವೇ ಭವನದ ವೃತ್ತಕ್ಕೆ ಬಂದು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮಧ್ಯಾಹ್ನ 3.35 ರ ಸುಮಾರಿಗೆ ಘಟನೆಗೆ ಸಂಬಂಧಿಸಿದಂತೆ ಕರೆ ಸ್ವೀಕರಿಸಲಾಯಿತು ಮತ್ತು ಅಗ್ನಿಶಾಮಕ ವಾಹನಗಳನ್ನು ಕಳುಹಿಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಲವಾರು ಪೊಲೀಸರು ಮತ್ತು ವಿಧಿವಿಜ್ಞಾನ ತನಿಖಾ ತಂಡ ಸ್ಥಳದಲ್ಲಿದ್ದಾರೆ.