ಮುಂಬೈ: ಅಪಘಾತದ ಸಮಯದಲ್ಲಿ ಕಾರಿನಲ್ಲಿರುವ ಏರ್ ಬ್ಯಾಗ್ ಪ್ರಯಾಣಿಕರಿಗೆ ವರದಾನ ಎಂದು ಹೇಳಲಾಗುತ್ತದೆ. ಆದರೆ ಅದೇ ಏರ್ ಬ್ಯಾಗ್ ವಾಶಿಯಲ್ಲಿ 6 ವರ್ಷದ ಮಗುವಿನ ಜೀವ ತೆಗೆದಿದೆ. ನವಿ ಮುಂಬೈನ ವಾಶಿ ಪ್ರದೇಶದಲ್ಲಿ ಈ ದಾರುಣ ಸಂಭವಿಸಿದೆ. ಅಪಘಾತದ ವೇಳೆ ಕಾರಿನ ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಮಗು ಹರ್ಷ ಮಾವ್ಜಿ ಅರೋಥಿಯಾ ಅವರು ಪ್ರಾಣ ಕಳೆದುಕೊಂಡಿದ್ದಾನೆ.
ಹರ್ಷ್ ಪ್ರಯಾಣಿಸುತ್ತಿದ್ದ ಎಸ್‌ಯುವಿ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಹೀಗಾಗಿ ಏರ್ ಬ್ಯಾಗ್ ಇದ್ದಕ್ಕಿದ್ದಂತೆ ತೆರೆದುಕೊಂಡಿದೆ. ಹೀಗಾಗಿ ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದ ಹರ್ಷ್ ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಈ ಅಪಘಾತದ ನಂತರ, ಎಸ್‌ಯುವಿ ಮಾಲೀಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹರ್ಷನ ತಂದೆ ಮಾವ್ಜಿ ಅರೋಥಿಯಾ ಪ್ರಕಾರ, ಹರ್ಷ ಮತ್ತು ಅವನ ಒಡಹುಟ್ಟಿದವರು ಪಾನಿಪುರಿ ತಿನ್ನಲು ಒತ್ತಾಯಿಸುತ್ತಿದ್ದರು. ಹೀಗಾಗಿ ಎಲ್ಲರೂ ಪಾನಿಪುರಿ ತಿನ್ನಲು ಹೋದೆವು ಎಂದು ಹರ್ಷನ ತಂದೆ ಹೇಳಿದರು.
ಮಾವ್ಜಿ ಕಾರು ಓಡಿಸುತ್ತಿದ್ದು ತಮ್ಮ ಪಕ್ಕದಲ್ಲಿ ಹರ್ಷ ಕುಳಿತಿದ್ದನು. ಉಳಿದವರು ಹಿಂದಿನ ಸೀಟಿನಲ್ಲಿ ಕುಳಿತಿದ್ದರು. ರಾತ್ರಿ 11.30ರ ಸುಮಾರಿಗೆ ವಾಶಿಯ ಸೆಕ್ಟರ್-28ರ ಬ್ಲೂ ಡೈಮಂಡ್ ಹೋಟೆಲ್ ಜಂಕ್ಷನ್ ಬಳಿ ಎಸ್‌ಯುವಿ ವೇಗವಾಗಿ ಮುಂದೆ ಸಾಗಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಆ ಆಘಾತದಿಂದ ಕಾರಿನ ಏರ್ ಬ್ಯಾಗ್ ತೆರೆದುಕೊಂಡಿದ್ದು, ಹರ್ಷ ಗಂಭೀರವಾಗಿ ಗಾಯಗೊಂಡಿದ್ದನು. ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.
ಹರ್ಷನ ಮೈಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ವೈದ್ಯರ ಪ್ರಕಾರ, ಪಾಲಿಟ್ರಾಮಾ ಶಾಕ್‌ನಿಂದ ಹರ್ಷ್ ಸಾವನ್ನಪ್ಪಿದ್ದಾರೆ. ಪಾಲಿಟ್ರಾಮಾದಿಂದ ದೇಹದಲ್ಲಿ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಗಾಯವಾಗಿದೆ. ಆಂತರಿಕ ಗಾಯಗಳಿಂದ ರಕ್ತಸ್ರಾವ ಉಂಟಾಗಿ ಹರ್ಷ ಮೃತಪಟ್ಟಿದ್ದಾನೆ. ಅಪಘಾತದಲ್ಲಿ ಮಾವ್ಜಿ ಮತ್ತು ಹರ್ಷ ಅವರ ಒಡಹುಟ್ಟಿದವರಿಗೂ ಸಣ್ಣಪುಟ್ಟ ಗಾಯಗಳಾಗಿವೆ.