ಚಂಡೀಗಢ: ಪಂಜಾಬ್‌ನಲ್ಲಿ 18 ತಿಂಗಳೊಳಗೆ 11 ಜನರನ್ನು ಹತ್ಯೆ ಮಾಡಿದ್ದ ಸರಣಿ ಹಂತಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ 33 ವರ್ಷದ ರಾಮ್ ಸ್ವರೂಪ್ ಚೌರಾ ಗ್ರಾಮದ ಹೋಶಿಯಾರ್ಪುರ ನಿವಾಸಿ. ಆರೋಪಿ ಮೊದಲು ಸಂತ್ರಸ್ತರಿಗೆ ಲಿಫ್ಟ್ ನೀಡಿ ನಂತರ ದರೋಡೆ ಮಾಡುತ್ತಿದ್ದನು. ಹಣ ಕೊಡಲು ನಿರಾಕರಿಸಿದರೆ ಕೊಂದು ಹಾಕುತ್ತಿದ್ದ. ಅಷ್ಟೇ ಅಲ್ಲ, ಮೃತರೆಲ್ಲರೂ ಗಂಡಸರಾಗಿದ್ದು ಆರೋಪಿ ಅವರ ಮೇಲೂ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂಬ ಆಘಾತಕಾರಿ ಸುದ್ದಿ ಸಹ ಹೊರಬಿದ್ದಿದೆ.
ಖಾಸಗಿ ಕಾರ್ಖಾನೆಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಮಾಜಿ ಸೈನಿಕನನ್ನು ಕೊಲೆ ಮಾಡಿದ ನಂತರ ಆತನ ಬೆನ್ನಿನ ಮೇಲೆ ರಾಮ್ ಸ್ವರೂಪ್ 'ವಂಚಕ' ಎಂದು ಬರೆದಿದ್ದನು. ಪೊಲೀಸರು ಪ್ರಕರಣವೊಂದರಲ್ಲಿ ರಾಮ್ ಸ್ವರೂಪ್ ನನ್ನು ಬಂಧಿಸಿದ್ದು ವಿಚಾರಣೆ ವೇಳೆ ಆತ 'ಸರಣಿ ಹಂತಕ' ಎಂಬುದು ಬೆಳಕಿಗೆ ಬಂದಿದೆ.
ಈತ ತನ್ನ ಕಾರಿನಲ್ಲಿ ಲಿಫ್ಟ್ ಕೊಟ್ಟು ದರೋಡೆ ಮಾಡುತ್ತಿದ್ದು, ಪ್ರತಿಭಟಿಸಿದರೆ ಹತ್ಯೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಘೋರ ಅಪರಾಧಗಳ ಪ್ರಕರಣಗಳನ್ನು ಬಗೆಹರಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು ಎಂದು ರೂಪನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಗುಲ್ನೀತ್ ಸಿಂಗ್ ಖುರಾನಾ ತಿಳಿಸಿದ್ದಾರೆ. ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಅಪರಾಧಿಗಳನ್ನು ಬಂಧಿಸಲು ಪೊಲೀಸ್ ತಂಡವನ್ನು ರಚಿಸಲಾಗಿದೆ ಎಂದು ಗುಲ್ನೀತ್ ಖುರಾನಾ ಹೇಳಿದ್ದಾರೆ. ಕಿರಾತ್‌ಪುರ ಸಾಹಿಬ್‌ನಲ್ಲಿ ನಡೆದ ಕೊಲೆ ಪ್ರಕರಣವನ್ನು ಉಲ್ಲೇಖಿಸಿದ ಅವರು, ಆಗಸ್ಟ್ 18ರಂದು ಟೋಲ್ ಪ್ಲಾಜಾ ಮೋದ್ರಾದಲ್ಲಿ ಚಹಾ ಮತ್ತು ನೀರು ಮಾರಾಟ ಮಾಡುತ್ತಿದ್ದ ಸುಮಾರು 37 ವರ್ಷದ ವ್ಯಕ್ತಿಯನ್ನು ಹತ್ಯೆ ಮಾಡಲಾಗಿತ್ತು ಎಂದು ಹೇಳಿದರು.
ಈ ಪ್ರಕರಣದ ತನಿಖೆಯಿಂದ ರಾಮ್ ಸ್ವರೂಪನನ್ನು ಬಂಧಿಸಲು ಕಾರಣವಾಯಿತು. ನಂತರ ವಿಚಾರಣೆಯ ಸಮಯದಲ್ಲಿ, ಆತ ಇತರ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬಹಿರಂಗವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣವಲ್ಲದೆ 10 ಕೊಲೆಗಳನ್ನು ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯು ಫತೇಘರ್ ಸಾಹಿಬ್ ಮತ್ತು ಹೋಶಿಯಾರ್‌ಪುರ ಜಿಲ್ಲೆಗಳಲ್ಲಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಅವರು ಹೇಳಿದರು. ಸಂತ್ರಸ್ತರನ್ನು ಕತ್ತು ಹಿಸುಕಿ ಅಥವಾ ಇಟ್ಟಿಗೆ ಮತ್ತು ಕಲ್ಲುಗಳನ್ನು ಬಳಸಿ ಹತ್ಯೆ ಮಾಡುತ್ತಿದ್ದಿದ್ದಾಗಿ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಮೃತರೆಲ್ಲರೂ ಪುರುಷರಾಗಿದ್ದು, ಅವರಿಗೆ ಲಿಫ್ಟ್ ನೀಡಿದ ನಂತರ ಹಣಕ್ಕೆ ಬೇಡಿಕೆ ಇಡುತ್ತಿದ್ದನು. ಹಣ ನೀಡಲು ನಿರಾಕರಿಸಿದೆ ಅವರನ್ನು ಹತ್ಯೆ ಮಾಡುತ್ತಿದ್ದನು. ಕೆಲವೊಮ್ಮೆ ರಾಮ್ ಸ್ವರೂಪ್ ಅಲಿಯಾಸ್ ಸೋಧಿ (ಸರಣಿ ಕೊಲೆಗಾರ) ಶವದ ಜೊತೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.