ಪಾಟ್ನ: ಬಿಹಾರ ಸಿಎಂ ನಿತೀಶ್ ಕುಮಾರ್ ಗೆ ಭಾರತ ರತ್ನ ನೀಡಬೇಕೆಂದು ಬಿಜೆಪಿ ಕೇಂದ್ರ ಸಚಿವರೊಬ್ಬರು ಆಗ್ರಹಿಸಿದ್ದಾರೆ. ನಿತೀಶ್ ಕುಮಾರ್ ಮಾತ್ರವಲ್ಲದೇ, ಒಡಿಶಾದ ಸಿಎಂ ನವೀನ್ ಪಟ್ನಾಯಕ್ ಅವರಿಗೂ ಭಾರತ ರತ್ನ ನೀಡಬೇಕೆಂಬುದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರ ಆಗ್ರಹವಾಗಿದೆ.
ಬಹಿರಂಗ ಹೇಳಿಕೆಗಳ ಮೂಲಕವೇ ಸುದ್ದಿಯಲ್ಲಿರುವ ಪಕ್ಷದ ನಾಯಕ ಗಿರಿರಾಜ್ ಸಿಂಗ್, ತಾವು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ಬೇಗುಸರೈ ಮಂದಿಯ ಭಾವನೆಗಳನ್ನು ತಾವು ತಿಳಿಸುತ್ತಿರುವುದಾಗಿ ಗಿರಿರಾಜ್ ಸಿಂಗ್ ಹೇಳಿದ್ದಾರೆ.
"ರಾಜ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ನಿತೀಶ್ ಕುಮಾರ್ ಅಧಿಕಾರಕ್ಕೆ ಏರುವವರೆಗೂ ಬಿಹಾರ ಹದಗೆಟ್ಟ ರಸ್ತೆಗಳು, ಶಾಲೆಗಳು ಮತ್ತು ಕಟ್ಟಡಗಳಿಗೆ ಹೆಸರುವಾಸಿಯಾಗಿತ್ತು. ಹಾಗೆಯೇ ನವೀನ್ ಪಟ್ನಾಯಕ್ ಒಡಿಶಾಗೆ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅವರಂತಹ ನಾಯಕರು ಭಾರತ ರತ್ನದಂತಹ ಅತ್ಯುನ್ನತ ಗೌರವಕ್ಕೆ ಅರ್ಹರು," ಅವರು ಗಿರಿರಾಜ್ ಸಿಂಗ್ ಹೇಳಿದ್ದಾರೆ.
ಬಿಹಾರದ ರಾಜಕೀಯ ವಲಯಗಳಲ್ಲಿ ನಿತೀಶ್ ಕುಮಾರ್ ಅವರ ವಿರೋಧಿ ಎಂದು ವ್ಯಾಪಕವಾಗಿ ಗ್ರಹಿಸಲ್ಪಟ್ಟಿರುವ ಸಿಂಗ್, ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಅವರ ಕಿಡಿಗೇಡಿತನದ ಹೊರತಾಗಿಯೂ, ಎನ್ ಡಿಎ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನತಾ ದಳ-ಯುನೈಟೆಡ್ ಮುಖ್ಯಸ್ಥರ ನಾಯಕತ್ವದಲ್ಲಿ ಸ್ಪರ್ಧಿಸಲು ಎದುರು ನೋಡುತ್ತಿದೆ ಎಂದು ಹೇಳಿದ್ದಾರೆ.
ಆರ್ ಜೆಡಿ ಎನ್ ಡಿಎ ನಲ್ಲಿನ ಬಿರುಕುಗಳ ನಡುವೆ ಲಾಭ ಪಡೆಯಲು ಮುಂದಾಗಿರುವ ಸಂದರ್ಭದಲ್ಲೇ ನಿತೀಶ್ ಕುಮಾರ್ ಗೆ ಭಾರತ ರತ್ನ ನೀಡಬೇಕೆಂಬ ಬೇಡಿಕೆ ಬಿಜೆಪಿಯಲ್ಲಿ ಕೇಳಿಬರುತ್ತಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ.
ಆರ್ ಜೆಡಿ ನಾಯಕ ತೇಜಸ್ವಿ ಯಾದವ್, "ಮುಖ್ಯಮಂತ್ರಿ ಕಚೇರಿಯನ್ನು ಬಿಜೆಪಿ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ನಿತೀಶ್ ಕುಮಾರ್ ಅವರ ನಾಲ್ವರು ಆಪ್ತರ ಪೈಕಿ ಇಬ್ಬರು ದೆಹಲಿಯಲ್ಲಿದ್ದಾರೆ, ಅವರು ಬಿಜೆಪಿ ನಾಯಕತ್ವದೊಂದಿಗೆ ಸಂಪರ್ಕದಲ್ಲಿದ್ದಾರೆ. ಅಮಿತ್ ಶಾ ಸ್ಪಷ್ಟವಾಗಿದ್ದಾರೆ. ಕೆಲಸದಲ್ಲಿ ನಿರತರಾಗಿದ್ದಾರೆ" ಎಂಬ ಆರೋಪ ಮಾಡಿದ್ದರು.
ಖಾಸಗಿ ಸುದ್ದಿ ವಾಹಿನಿಯೊಂದು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಬಿಹಾರದ ವಿಧಾನಸಭಾ ಚುನಾವಣೆಗೆ ನಿತೀಶ್ ಕುಮಾರ್ ಎನ್‌ಡಿಎ ಮುಖವಾಗಲಿದ್ದಾರೆ ಎಂಬುದನ್ನು ದೃಢೀಕರಿಸಲು ಅಮಿತ್ ಶಾ ಹಿಂಜರಿದ ಹಿನ್ನೆಲೆಯಲ್ಲಿ ತೇಜಸ್ವಿ ಯಾದವ್ ಈ ಹೇಳಿಕೆಯನ್ನು ನೀಡಿದ್ದರು.
ಮಹಾರಾಷ್ಟ್ರದಲ್ಲಿ ನಡೆದಂತೆಯೇ ಬಿಹಾರದಲ್ಲಿಯೂ ಬಿಜೆಪಿ ತಂತ್ರಗಾರಿಕೆಗೆ ಮುಂದಾಗಬಹುದು ಎಂಬ ಊಹಾಪೋಹಗಳಿಗೆ ಕಾರಣವಾಗಿದೆ. ಕಳೆದ ತಿಂಗಳು ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಎನ್‌ಡಿಎ ಮುಖವಾಗಿ ಬಿಂಬಿಸಲಾಗಿರಲಿಲ್ಲ.