ಶ್ರೀನಗರ: ಈ ವರ್ಷದ ಮೊದಲ ಹಿಮಪಾತದಿಂದಾಗಿ ಜಮ್ಮು ಮತ್ತು ಕಾಶ್ಮೀರದ (ಜೆ-ಕೆ) ಅನಂತನಾಗ್‌ನ ಖಾಜಿಗುಂಡ್ ಪಟ್ಟಣದಲ್ಲಿ ಸುಮಾರು 2,000 ವಾಹನಗಳು ಸಿಲುಕಿಕೊಂಡಿವೆ ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಸದ್ಯದ ಪರಿಸ್ಥಿತಿಯ ಬಗ್ಗೆ ಅನಂತನಾಗ್‌ನ ಡೆಪ್ಯೂಟಿ ಕಮಿಷನರ್ ಅವರೊಂದಿಗೆ ಮಾತನಾಡಿದ್ದೇನೆ ಎಂದು ಸಿಎಂ ಅಬ್ದುಲ್ಲಾ ತಿಳಿಸಿದ್ದಾರೆ. ಭಾರೀ ವಾಹನಗಳು ಚಲಿಸಲು ಅನುಮತಿ ನೀಡಲಾಗಿದೆ. ಉಳಿದ ವಾಹನಗಳನ್ನು ತೆರವುಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಅವರು, ಕಾಜಿಗುಂಡ್ ಮತ್ತು ಸುರಂಗದ ನಡುವಿನ ರಸ್ತೆಯ ಸದ್ಯದ ಪರಿಸ್ಥಿತಿಯ ಕುರಿತು ಅನಂತನಾಗ್ ಜಿಲ್ಲೆಯ ಡಿಸಿ ಅವರೊಂದಿಗೆ ಮಾತನಾಡಿದ್ದೇನೆ. ಹಿಮಾವೃತ ಪರಿಸ್ಥಿತಿಗಳು ಟ್ರಾಫಿಕ್ ಬ್ಯಾಕ್‌ಅಪ್‌ಗೆ ಕಾರಣವಾಗಿವೆ. ಎರಡೂ ದಿಕ್ಕುಗಳಲ್ಲಿ ವಾಹನಗಳು ಸಿಕ್ಕಿಬಿದ್ದಿದ್ದು ನಿಧಾನವಾಗಿ ಚಲಿಸುತ್ತಿವೆ ಮತ್ತು ಅಗತ್ಯವಿರುವಲ್ಲಿ ಸಹಾಯ ಮಾಡಲಾಗುತ್ತಿದೆ ಎಂದಿದ್ದಾರೆ.
ಡಿಸಿ ತಮ್ಮ ತಂಡದೊಂದಿಗೆ ಸ್ಥಳದಲ್ಲಿದ್ದ ಮೊಕ್ಕಾಂ ಹೂಡಿದ್ದಾರೆ. ಕುಟುಂಬಗಳು ಹಾಗೂ ಮಕ್ಕಳಿರುವ ವಾಹನಗಳು ಚಲಿಸಲು ಆದ್ಯತೆ ನೀಡಬೇಕು ಎಂದು ನಾನು ಅವರಿಗೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ. ಅಗತ್ಯವಿದ್ದರೆ ರಾತ್ರಿಯ ತಂಗಲು ವ್ಯವಸ್ಥೆ ಮಾಡಲಾಗುವುದು. ಯಾವುದೇ ವೈದ್ಯಕೀಯ ತುರ್ತು ಸಂದರ್ಭದಲ್ಲಿ ಡಿಸಿ ಆಂಬ್ಯುಲೆನ್ಸ್‌ನೊಂದಿಗೆ ಇರುತ್ತಾರೆ" ಎಂದು ಒಮರ್ ಅಬ್ದುಲ್ಲಾ ತಿಳಿಸಿದ್ದಾರೆ.
ಬನಿಹಾಲ್‌ನಿಂದ ಶ್ರೀನಗರದವರೆಗೆ ನಿರಂತರವಾಗಿ ಹಿಮ ಬೀಳುತ್ತಿದೆ. ಪರಿಸ್ಥಿತಿಗಳು ಸಾಕಷ್ಟು ಅಪಾಯದಿಂದ ಕೂಡಿದೆ. ಸುರಂಗ ಮತ್ತು ಖಾಜಿಗುಂಡ್ ನಡುವೆ ಸುಮಾರು 2000 ವಾಹನಗಳು ಸಿಲುಕಿಕೊಂಡಿವೆ ಎಂದು ನನಗೆ ಮಾಹಿತಿ ಬಂದಿದ್ದು, ನನ್ನ ಕಚೇರಿಯು ನಿರಂತರ ಸಂಪರ್ಕದಲ್ಲಿದೆ. ದಕ್ಷಿಣ ಕಾಶ್ಮೀರದಲ್ಲಿ ಜಿಲ್ಲಾಡಳಿತ ಹಿಮ ತೆರವು ಮಾಡಿದೆ, ಆದರೆ ರಸ್ತೆ ತುಂಬಾ ಮಂಜುಗಡ್ಡೆಯಾಗಿದೆ ಎಂದು ಒಮರ್ ಅಬ್ದುಲ್ಲಾ ತಿಳಿಸಿದ್ದಾರೆ. ಕೇಂದ್ರಾಡಳಿತ ಪ್ರದೇಶದ ಬಾರಾಮುಲ್ಲಾ ಜಿಲ್ಲೆಯಲ್ಲೂ ಶುಕ್ರವಾರ ಹೊಸ ಹಿಮಪಾತವಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಡಿಸೆಂಬರ್ 30 ರವರೆಗೆ ಲಘು ಮಳೆ ಮತ್ತು ಹಿಮಪಾತವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.