ಪಾಟ್ನಾ: ಬಿಹಾರ ಪಬ್ಲಿಕ್ ಸರ್ವಿಸ್ ಕಮಿಷನ್(ಬಿಪಿಎಸ್‌ಸಿ) ಪರೀಕ್ಷೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲೆ ಭಾನುವಾರ ರಾತ್ರಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ ನಂತರ ರಾಜಕೀಯ ತೀವ್ರಗೊಂಡಿದೆ.
ರಾಜಕಾರಣಿಯಾಗಿ ಮಾರ್ಪಟ್ಟಿರುವ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರು ಈ ಹಿಂದೆ ಆಕಾಂಕ್ಷಿಗಳಿಗೆ ಬೆಂಬಲ ವ್ಯಕ್ತಪಡಿಸುವ ಮೂಲಕ ಪ್ರಕ್ಷುಬ್ಧತೆಯನ್ನು ಹೆಚ್ಚಿಸಿದ್ದರು. ಆದರೆ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದಾಗ ಅವರಿಗೆ ತೀವ್ರ ಹಿನ್ನಡೆಯಾಗಿದೆ.
ಲಾಠಿ ಚಾರ್ಜ್ ವೇಳೆ ಗೈರು ಆಗಿದ್ದರಿಂದ ಕೋಪಗೊಂಡ ಪ್ರತಿಭಟನಾಕಾರರು, "ಪ್ರಶಾಂತ್ ಕಿಶೋರ್, ಗೋ ಬ್ಯಾಕ್" ಎಂಬ ಘೋಷಣೆಗಳನ್ನು ಕೂಗುವ ಮೂಲಕ ಪ್ರತಿಭಟನಾ ಸ್ಥಳ ತೊರೆಯುವಂತೆ ಒತ್ತಾಯಿಸಿದರು. ಈ ವೇಳೆ ಪ್ರಶಾಂತ್ ಕಿಶೋರ್ ಮತ್ತು ವಿದ್ಯಾರ್ಥಿ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು.
"ನೀವು ನಮ್ಮಿಂದ ಬೆಂಬಲ ತೆಗೆದುಕೊಂಡು ನಮ್ಮ ವಿರುದ್ಧವೇ ಮಾತನಾಡುತ್ತೀರಾ?" ಎಂದು ಕಿಶೋರ್ ಪ್ರತಿಕ್ರಿಯಿಸಿದ ನಂತರ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿತು.
ಆಕಾಂಕ್ಷಿಗಳು ಕಿಶೋರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು, ಪ್ರತಿಭಟನೆಯ ನಿರ್ಣಾಯಕ ಕ್ಷಣಗಳಲ್ಲಿ ಗೈರು ಆಗಿದ್ದು ಏಕೆ ಎಂದು ಪ್ರಶ್ನಿಸಿದರು. ನೀವೂ ಒಬ್ಬ ಅವಕಾಶವಾದಿ. ಲಾಠಿ ಚಾರ್ಜ್ ವೇಳೆ ಪ್ರಶಾಂತ್ ಕಿಶೋರ್ ಎಲ್ಲಿದ್ದರು? ಎಂದು ಪ್ರಶ್ನಿಸಿದರು.
ಡಿಸೆಂಬರ್ 13 ರಿಂದ, ಅಭ್ಯರ್ಥಿಗಳು ಬಿಪಿಎಸ್‌ಸಿ ಪರೀಕ್ಷೆಯಲ್ಲಿ ಅಕ್ರಮಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಮತ್ತು ಮರು ಪರೀಕ್ಷೆಗೆ ಒತ್ತಾಯಿಸಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಪರೀಕ್ಷಾರ್ಥಿಗಳು ಆರೋಪಿಸಿದ್ದಾರೆ. ಪ್ರಶ್ನೆ ಪತ್ರಿಕೆ ವಿತರಣೆಯಲ್ಲಿ ವಿಳಂಬವಾಗಿದೆ ಎಂದು ಕೆಲವರು ಹೇಳಿದ್ದು, ಕೆಲವು ವಿದ್ಯಾರ್ಥಿಗಳು ಒಂದು ಗಂಟೆಯ ನಂತರ ಅದನ್ನು ಪಡೆದುಕೊಂಡಿದ್ದಾರೆ. ಇನ್ನು ಕೆಲವರು ಉತ್ತರ ಪತ್ರಿಕೆಗಳು ಹರಿದಿವೆ ಎಂದು ಹೇಳಿದ್ದು, ಅಕ್ರಮ ಖಂಡಿಸಿ ಪಾಟ್ನಾದ ಗಾರ್ಡನಿಬಾಗ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.