ದೇಶ

11 ದಿನಗಳಲ್ಲಿ ರಾಮ ಮಂದಿರಕ್ಕೆ 25 ಲಕ್ಷ  ಭಕ್ತರು ಭೇಟಿ, ಇದುವರೆಗೆ 11 ಕೋಟಿ ರೂ. ಕಾಣಿಕೆ ಸಂಗ್ರಹ

Lingaraj Badiger

ಅಯೋಧ್ಯೆ: ಜನವರಿ 22 ರಂದು ಉದ್ಘಾಟನೆಯಾದ ಅಯೋಧ್ಯೆಯ ರಾಮ ಮಂದಿರಕ್ಕೆ ಕಳೆದ 11 ದಿನಗಳಲ್ಲಿ ಸುಮಾರು 25 ಲಕ್ಷ ಭಕ್ತರು ಭೇಟಿ ನೀಡಿದ್ದು, ಇದುವರೆಗೆ 11 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ.

ದೇವಸ್ಥಾನ ಟ್ರಸ್ಟ್‌ನ ಕಚೇರಿ ಪ್ರಭಾರಿ ಪ್ರಕಾಶ್ ಗುಪ್ತಾ ಅವರ ಪ್ರಕಾರ, ಕಳೆದ 11 ದಿನಗಳಲ್ಲಿ ಕಾಣಿಕೆ ಪೆಟ್ಟಿಗೆಗಳಿಂದ ಸುಮಾರು 8 ಕೋಟಿ ರೂಪಾಯಿ ಸಂಗ್ರಹವಾಗಿದೆ ಮತ್ತು ಚೆಕ್ ಹಾಗೂ ಆನ್‌ಲೈನ್ ಮೂಲಕ ಕಾಣಿಕೆ ಪಡೆದ ಮೊತ್ತ ಸುಮಾರು 3.50 ಕೋಟಿ ರೂಪಾಯಿ ಎಂದು ತಿಳಿಸಿದ್ದಾರೆ.

ದೇಗುಲದ ಗರ್ಭಗುಡಿಯ ಮುಂಭಾಗದ ‘ದರ್ಶನ ಪಥ’ದ ಬಳಿ ನಾಲ್ಕು ದೊಡ್ಡ ಗಾತ್ರದ ಕಾಣಿಕೆ ಪೆಟ್ಟಿಗೆಗಳನ್ನು ಇಡಲಾಗಿದ್ದು, ಅದರಲ್ಲಿ ಭಕ್ತರು ದೇಣಿಗೆ ನೀಡುತ್ತಾರೆ. ಅಲ್ಲದೆ, 10 ಗಣಕೀಕೃತ ಕೌಂಟರ್‌ಗಳಲ್ಲಿ ಕಾಣಿಕೆ ನೀಡಲು ಅವಕಾಶ ನೀಡಲಾಗಿದೆ ಎಂದು ಗುಪ್ತಾ ಹೇಳಿದ್ದಾರೆ.

ದೇಣಿಗೆ ಕೌಂಟರ್‌ನಲ್ಲಿ ದೇವಸ್ಥಾನದ ಟ್ರಸ್ಟ್‌ ನೌಕರರನ್ನು ನೇಮಿಸಲಾಗಿದ್ದು, ಸಂಜೆ ಕೌಂಟರ್‌ ಮುಚ್ಚಿದ ನಂತರ ಟ್ರಸ್ಟ್‌ ಕಚೇರಿಯಲ್ಲಿ ಸ್ವೀಕರಿಸಿದ ಕಾಣಿಕೆ ಮೊತ್ತದ ಲೆಕ್ಕವನ್ನು ನೀಡುತ್ತಾರೆ ಎಂದರು.

11 ಬ್ಯಾಂಕ್ ಉದ್ಯೋಗಿಗಳು ಮತ್ತು ದೇವಸ್ಥಾನದ ಟ್ರಸ್ಟ್‌ನ ಮೂವರನ್ನು ಒಳಗೊಂಡ 14 ಜನರ ತಂಡ ನಾಲ್ಕು ಕಾಣಿಕೆ ಪೆಟ್ಟಿಗೆಗಳಲ್ಲಿ ಸಂಗ್ರಹವಾಗಿರುವ ಹಣವನ್ನು ಎಣಿಸುತ್ತಾರೆ. ದೇಣಿಗೆ ಮೊತ್ತವನ್ನು ಠೇವಣಿ ಇಡುವುದರಿಂದ ಹಿಡಿದು ಎಣಿಸುವವರೆಗೆ ಎಲ್ಲವನ್ನೂ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ಮಾಡಲಾಗುತ್ತದೆ ಎಂದು ಗುಪ್ತಾ ತಿಳಿಸಿದ್ದಾರೆ.

SCROLL FOR NEXT