ದೇಶ

ಮೇಯರ್ ಚುನಾವಣೆಯಲ್ಲೇ 'ರಿಗ್' ಮಾಡುವ ಬಿಜೆಪಿ, ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಏನು ಮಾಡಬಹುದೆಂದು ಊಹಿಸಿ: ಕೇಜ್ರಿವಾಲ್

Lingaraj Badiger

ನವದೆಹಲಿ: ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಚಂಡೀಗಢ ಮೇಯರ್ ಚುನಾವಣೆಯಲ್ಲಿ "ರಿಗ್" ಮಾಡಲು ಸಾಧ್ಯವಾದರೆ, ಅದು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಯಾವ ಹಂತಕ್ಕೆ ಬೇಕಾದರೂ ಹೋಗಬಹುದು ಎಂದು ಶುಕ್ರವಾರ ಹೇಳಿದ್ದಾರೆ.

ಇಂದು ಪಕ್ಷದ ಕಚೇರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಆಮ್ ಆದ್ಮಿ ಪಕ್ಷದ(ಎಎಪಿ) ಮುಖಂಡರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ದೆಹಲಿ ಸಿಎಂ, ಚಂಡೀಗಢ ಮೇಯರ್ ಚುನಾವಣೆಯಲ್ಲಿ ವಿಶ್ವದ ದೊಡ್ಡ ಪಕ್ಷ ಮತಗಳನ್ನು ಕದಿಯುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದರು.

ಕಳೆದ ಮಂಗಳವಾರ ಚಡೀಗಢ ಮೇಯರ್, ಉಪಮೇಯರ್ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಕಾಂಗ್ರೆಸ್-ಎಎಪಿ ಮೈತ್ರಿಕೂಟವನ್ನು ಸೋಲಿಸಿ ಬಿಜೆಪಿ ಗೆದ್ದಿದೆ.

"ಕಳೆದ ಕೆಲವು ವರ್ಷಗಳಲ್ಲಿ, ಬಿಜೆಪಿ ಚುನಾವಣೆಯಲ್ಲಿ ರಿಗಿಂಗ್ ಮಾಡುತ್ತದೆ ಎಂದು ನಾವು ಕೇಳಿದ್ದೇವೆ. ಅವರು ಇವಿಎಂಗಳನ್ನು ಟ್ಯಾಂಪರ್ ಮಾಡುತ್ತಾರೆ. ಮತದಾರರ ಪಟ್ಟಿಯಿಂದ ಮತದಾರರ ಹೆಸರನ್ನು ಅಳಿಸುತ್ತಾರೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ಪುರಾವೆಗಳು ಸಿಕ್ಕಿರಲಿಲ್ಲ. ಆದರೆ ಚಂಡೀಗಢದಲ್ಲಿ ಮತಗಳನ್ನು ಕದಿಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ" ಕೇಜ್ರಿವಾಲ್ ಆರೋಪಿಸಿದರು.

ಚಂಡೀಗಢದ ಮೇಯರ್ ಚುನಾವಣೆಯಲ್ಲಿಯೇ ಇಂತಹ ಅಕ್ರಮಗಳನ್ನು ಎಸಗಿದರೆ, ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಅವರು ಏನು ಬೇಕಾದರೂ ಮಾಡುತ್ತಾರೆ. ಅವರು ಅಧಿಕಾರಕ್ಕಾಗಿ ದೇಶವನ್ನು ಮಾರಬಹುದು. ಆದರೆ ನಾವು ಅದಕ್ಕೆ ಅವಕಾಶ ನೀಡುವುದಿಲ್ಲ. ನಾವು ಪ್ರಜಾಪ್ರಭುತ್ವ ಮತ್ತು ದೇಶವನ್ನು ಉಳಿಸಬೇಕಾಗಿದೆ" ಆಪ್ ಮುಖ್ಯಸ್ಥ ಹೇಳಿದರು.

ಮೇಯರ್ ಚುನಾವಣೆಯಲ್ಲಿ ರಿಗಿಂಗ್ ವಿರೋಧಿಸಿ ಬಿಜೆಪಿ ಪ್ರಧಾನ ಕಚೇರಿಯ ಮುಂದೆ ಎಎಪಿ ಪ್ರತಿಭಟನೆ ಯೋಜಿಸಿತ್ತು. ಆದರೆ ಭಾರೀ ಪೊಲೀಸ್ ನಿಯೋಜನೆ ಮಾಡಿ, ಬ್ಯಾರಿಕೇಡ್ ಗಳನ್ನು ಹಾಕಿದ್ದರಿಂದ ಎಎಪಿ ಕಾರ್ಯಕರ್ತರು ಅಲ್ಲಿಗೆ ತಲುಪಲು ಸಾಧ್ಯವಾಗಲಿಲ್ಲ.

SCROLL FOR NEXT