ದೇಶ

ಬಿಜೆಪಿ 'ಮತಗಳು ಚದುರಿ ಹೋಗಬಾರದು' ಎಂಬ ಕಾರಣಕ್ಕೆ ಅಡ್ವಾಣಿಗೆ ಭಾರತ ರತ್ನ ನೀಡಿದ್ದಾರೆ: ಅಖಿಲೇಶ್ ಯಾದವ್

Lingaraj Badiger

ಲಖನೌ: ಕೇಸರಿ ಪಕ್ಷದ "ಮತಗಳು ಚದುರಿಹೋಗಬಾರದು" ಎಂಬ ಕಾರಣಕ್ಕೆ ಬಿಜೆಪಿ ಹಿರಿಯ ನಾಯಕ, ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ನೀಡಲಾಗುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಶನಿವಾರ ಹೇಳಿದ್ದಾರೆ.
  
ಬಿಜೆಪಿ ಹಿರಿಯ ನಾಯಕನಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಘೋಷಿಸಿದ ಕೆಲವೇ ಗಂಟೆಗಳ ನಂತರ ಯಾದವ್ ಈ ಹೇಳಿಕೆ ನೀಡಿದ್ದಾರೆ.

ಅಡ್ವಾಣಿ ಅವರಿಗೆ ಭಾರತ ರತ್ನ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಘೋಷಿಸಿದರು ಮತ್ತು ಇದು ಅವರಿಗೆ "ಅತ್ಯಂತ ಭಾವನಾತ್ಮಕ ಕ್ಷಣ" ಎಂದು ಬಣ್ಣಿಸಿದ್ದರು.

ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಿಸಿದ ಬಗ್ಗೆ ಪ್ರತಿಕ್ರಿಯಿಸಿದ ಎಸ್‌ಪಿ ಮುಖ್ಯಸ್ಥರು, "ಬಿಜೆಪಿ ತನ್ನ ಅಧಿಕಾರಾವಧಿ ಮುಗಿಯುವ ಮುನ್ನ(ಕೇಂದ್ರದಲ್ಲಿ) ಕೇಸರಿ ಪಕ್ಷದ ಮತಗಳು ಚದುರಿಹೋಗದಂತೆ ತಡೆಯಲು ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ನೀಡಿದೆ" ಎಂದರು.

"ಈ ಭಾರತ ರತ್ನವನ್ನು ತಮ್ಮ ಸ್ವಂತ ಮತಗಳನ್ನು ಕ್ರೋಢೀಕರಿಸಲು ನೀಡಲಾಗುತ್ತಿದೆ. ಅವರನ್ನು ಗೌರವಿಸಬೇಕು ಎಂದು ನೀಡುತ್ತಿಲ್ಲ ಎಂದು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ತಿಳಿಸಿದ್ದಾರೆ.

ಇದೇ ವೇಳೆ ಇಂಡಿಯಾ ಮೈತ್ರಿಕೂಟದ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಯಾದವ್, ಸೀಟು ಹಂಚಿಕೆಯಲ್ಲಿ ಬಹುತೇಕ ಒಮ್ಮತವಿದೆ. ಸೀಟು ಹಂಚಿಕೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿದರು.

ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತೀರಾ ಎಂಬ ಪ್ರಶ್ನೆಗೆ, ಅವರು ಇನ್ನೂ ನನಗೆ ಯಾವುದೇ ಆಹ್ವಾನ ನೀಡಿಲ್ಲ ಎಂದು ಯಾದವ್ ತಿಳಿಸಿದರು.

SCROLL FOR NEXT