ದೇಶ

ಅಡ್ವಾಣಿ ದೇಶವನ್ನು ಒಂದು ಪಕ್ಷ, ಒಂದು ಕುಟುಂಬದ ಹಿಡಿತದಿಂದ ರಕ್ಷಿಸಿದ್ದಾರೆ: ಪ್ರಧಾನಿ ಮೋದಿ

Lingaraj Badiger

ಸಂಬಲ್‌ಪುರ: ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಉಪ ಪ್ರಧಾನಿ ಲಾಲ್‌ ಕೃಷ್ಣ ಅಡ್ವಾಣಿ ಅವರು ದೇಶ ಸೇವೆಗೆ ನೀಡಿದ ಅಮೂಲ್ಯ ಕೊಡುಗೆಯನ್ನು ಗುರುತಿಸಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಇಂದು ಸಂಬಲ್‌ಪುರದಲ್ಲಿ ಸುಮಾರು 70,000 ಕೋಟಿ ರೂ.ಗಳ ಯೋಜನೆಗಳಿಗೆ ಚಾಲನೆ ನೀಡಿದ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 'ದೇಶ ಮೊದಲು' ಎಂಬ ಸಿದ್ಧಾಂತವನ್ನು ನಂಬುವ ಎಲ್ಲರಿಗೂ ಇಂತಹ ಗೌರವ ಸಲ್ಲಬೇಕು ಎಂದರು.

"ಇಬ್ಬರು ಸಂಸದರೊಂದಿಗೆ ತನ್ನ ಪಯಣವನ್ನು ಆರಂಭಿಸಿದ ಪಕ್ಷವನ್ನು ವಿಶ್ವದ ಅತಿದೊಡ್ಡ ಪಕ್ಷವಾಗಿ ಪರಿವರ್ತಿಸಲು ಸಹಾಯ ಮಾಡಿದ ಪಕ್ಷದ ಕಾರ್ಯಕರ್ತನಿಗೆ ಈ ಗೌರವ" ಎಂದು ಮೋದಿ ಹೇಳಿದ್ದಾರೆ.

ವಿರೋಧಿಗಳು ಬಿಜೆಪಿಯನ್ನು ಅಸ್ಪೃಶ್ಯ ಎಂದು ಘೋಷಿಸಿದ ಸಮಯವನ್ನು ನೆನಪಿಸಿಕೊಂಡ ಮೋದಿ, ಅಟಲ್ ಬಿಹಾರಿ ವಾಜಪೇಯಿ ಮತ್ತು ಅಡ್ವಾಣಿ ಈ ಸಿದ್ಧಾಂತವನ್ನು ಸೋಲಿಸಲು ಮತ್ತು ಪಕ್ಷವನ್ನು ದೇಶದಲ್ಲಿ ಪ್ರಮುಖ ರಾಜಕೀಯ ಶಕ್ತಿಯಾಗಿ ಬೆಳೆಯಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು ಎಂದರು.

ಒಂದು ಪಕ್ಷ ಮತ್ತು ಒಂದು ಕುಟುಂಬದ ಕಪಿಮುಷ್ಠಿಯಿಂದ ದೇಶವನ್ನು ರಕ್ಷಿಸುವಲ್ಲಿ ಅಡ್ವಾಣಿ ಅವರು ವಹಿಸಿದ ಪಾತ್ರವನ್ನು ಶ್ಲಾಘಿಸಿದ ಪ್ರಧಾನಿ ಮೋದಿ, 96 ವರ್ಷದ ಬಿಜೆಪಿ ನಾಯಕ, ರಾಷ್ಟ್ರೀಯತೆಯ ಸಿದ್ಧಾಂತದೊಂದಿಗೆ ಜನರನ್ನು ಸಂಪರ್ಕಿಸುವ ಮೂಲಕ ಭಾರತೀಯ ಪ್ರಜಾಪ್ರಭುತ್ವವನ್ನು ಇನ್ನಷ್ಟು ಬಲಪಡಿಸುವ ಸವಾಲು ತೆಗೆದುಕೊಂಡಿದ್ದರು ಎಂದು ಹೇಳಿದರು. .

"ನಾವು ಈಗ ಅವರ ತಪಸ್ಸಿನ ಫಲಿತಾಂಶವನ್ನು ನೋಡುತ್ತಿದ್ದೇವೆ. ರಾಷ್ಟ್ರಕ್ಕಾಗಿ ಅವರು ನೀಡಿದ ಕೊಡುಗೆಗಾಗಿ ನಾನು ಮತ್ತೊಮ್ಮೆ ಅಡ್ವಾಣಿ ಜಿ ಅವರನ್ನು ಅಭಿನಂದಿಸುತ್ತೇನೆ ಮತ್ತು ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸುತ್ತೇನೆ" ಎಂದು ಮೋದಿ ಹೇಳಿದ್ದಾರೆ.

SCROLL FOR NEXT