ದೇಶ

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಾಮೂಹಿಕ ವಂಚನೆ: ವಧುವಿನ ವೇಷದಲ್ಲಿ ಗಂಡಸರು, ತಮಗೆ ತಾವೇ ಹಾರ ಹಾಕಿಕೊಂಡ ಹೆಂಗಸರು!

Srinivasamurthy VN

ಬಾಲಿಯಾ: ಉತ್ತರ ಪ್ರದೇಶದ ಸರ್ಕಾರದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಾಮೂಹಿಕ ವಂಚನೆ ಬೆಳಕಿಗೆ ಬಂದಿದ್ದು, ಸರ್ಕಾರ ನೀಡುವ ನಗದಿಗಾಗಿ ಹಲವರು ವಂಚನೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಹೌದು.. ಸಾಮೂಹಿಕ ವಿವಾಹ ವಂಚನೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಉತ್ತರ ಪ್ರದೇಶದಲ್ಲಿ ಇಬ್ಬರು ಸರ್ಕಾರಿ ಅಧಿಕಾರಿಗಳು ಸೇರಿದಂತೆ 15 ಮಂದಿಯನ್ನು ಬಂಧಿಸಲಾಗಿದೆ. ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮದುಮಗಳು ತನಗೆ ತಾನೇ ಹಾರ ಹಾಕಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಈ ಹಗರಣ ಬಯಲಾಗಿದೆ. ಕೆಲವು ಪುರುಷರು ಮದುವೆಗೆ ವಧುವಿನಂತೆ ವೇಷ ಧರಿಸಿಕೊಂಡು ಬಂದಿದ್ದು, ತಮ್ಮ ಮುಖಗಳನ್ನು ಮರೆಮಾಚಿಕೊಂಡು ನಿಂತಿರುವ ದೃಶ್ಯಗಳು ವೈರಲ್ ಆಗುತ್ತಿವೆ. 

ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ಜನವರಿ 25 ರಂದು ಸಮುದಾಯ ವಿವಾಹ ನಡೆದಿತ್ತು. ಈ ಸಮಾರಂಭದಲ್ಲಿ ಸುಮಾರು 568 ಜೋಡಿಗಳು ವಿವಾಹವಾಗಿದ್ದರು ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಈ ಸಾಮೂಹಿಕ ವಿವಾಹದಲ್ಲಿ ವಧು ವರರಂತೆ ಪೋಸ್ ನೀಡಲು ಹಲವರಿಗೆ ಹಣದ ಆಮಿಷ ನೀಡಲಾಗಿತ್ತು. ಕೆಲವು ಗಂಡಸರಂತು ಹಣದಾಸೆಗೆ ವಧುವಿನಂತೆ ವೇಷದರಿಸಿದ್ದು ಅಚ್ಚರಿಯಾಗಿತ್ತು. 

ಮೂಲಗಳ ಪ್ರಕಾರ ವಧು-ವರರಂತೆ ಪೋಸ್ ನೀಡಲು ಪುರುಷ ಮತ್ತು ಮಹಿಳೆ ಇಬ್ಬರಿಗೂ 500 ರೂ ರಿಂದ 2,000ರೂ ವರೆಗೂ ಹಣ ನೀಡಲಾಗಿದೆ ಎಂದು ಸ್ಥಳೀಯರೊಬ್ಬರು ಆರೋಪಿಸಿದ್ದಾರೆ. "ಕೆಲವು ಮಹಿಳೆಯರಿಗೆ ಯಾರೂ ಇರಲಿಲ್ಲ. ಅವರೇ ವರ್ಮಾಲ (ಮಾಲೆ) ಧರಿಸಿದ್ದರು ಸ್ಥಳೀಯ ವಿಮಲ್ ಕುಮಾರ್ ಪಾಠಕ್ ಹೇಳಿದರು.

ಇದೇ ವಿಚಾರವಾಗಿ ಮಾತನಾಡಿದ್ದ 19 ವರ್ಷದದ ಯುವಕ ರಾಜ್ ಕುಮಾರ್ ತನಗೆ ವರನಂತೆ ಪೋಸ್ ನೀಡಲು ಹಣ ನೀಡಲಾಗಿತ್ತು. ನಾನು ಸಾಮೂಹಿಕ ವಿವಾಹ ನೋಡಲು ಹೋಗಿದ್ದೆ. ಆದರೆ ಅವರು ನನ್ನನ್ನು ಅಲ್ಲೇ ಕೂರಿಸಿ ವರನಂತೆ ಪೋಸ್ ನೀಡಲು ಹೇಳಿ ಹಣ ನೀಡಿದರು ಎಂದು ಹೇಳಿದ್ದಾನೆ.

ಅಂದಹಾಗೆ ಈ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಬಿಜೆಪಿ ಶಾಸಕ ಕೇತ್ಕಿ ಸಿಂಗ್ ಮುಖ್ಯ ಅತಿಥಿಯಾಗಿದ್ದರು. ಈ ಬಗ್ಗೆ ಮಾಹಿತಿ ನೀಡಿರುವ ಅವರು, ಕಾರ್ಯಕ್ರಮಕ್ಕೆ ಕೇವಲ 2 ದಿನಗಳ ಹಿಂದಷ್ಟೇ ನನಗೆ ಮಾಹಿತಿ ನೀಡಿದ್ದರು. ಆದರೆ ನಾನು ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ತಿಳಿದುಬಂತು. ಈ ಬಗ್ಗೆ ಇದೀಗ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಸರ್ಕಾರಿ ವೆಬ್‌ಸೈಟ್ ಪ್ರಕಾರ, ಉತ್ತರ ಪ್ರದೇಶ ಸರ್ಕಾರದ ಈ ಸಾಮೂಹಿಕ ಯೋಜನೆಯಡಿ ಸರ್ಕಾರವು ಒಂದು ಜೋಡಿಗೆ 51,000 ರೂ ನೀಡುತ್ತದೆ, ಇದರಲ್ಲಿ ಹುಡುಗಿಗೆ 35,000 ರೂ ನೀಡಲಾಗುತ್ತಿದ್ದು, ಮದುವೆಯ ಸಾಮಗ್ರಿಗಳ ಖರೀದಿಗೆ 10,000 ರೂ ಮತ್ತು 6,000 ರೂ ವಿವಾಹ ಕಾರ್ಯಕ್ರಮಕ್ಕೆ ಹೋಗುತ್ತದೆ. ವಿಪರ್ಯಾಸ ಎಂದರೆ ಈ ಸಾಮೂಹಿಕ ವಿವಾಹದ ಹಣ ಜೋಡಿಗಳಿಗೆ ವರ್ಗಾವಣೆ ಆಗುವ ಮುನ್ನವೇ ಈ ಹಗರಣ ಬಯಲಾಗಿದೆ. 

ಈ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರದ ಅಧಿಕಾರಿಯೊಬ್ಬರು, "ನಾವು ಈ ವಿಷಯದ ಬಗ್ಗೆ ತನಿಖೆ ನಡೆಸಲು ಮತ್ತು ಎಲ್ಲಾ ಫಲಾನುಭವಿಗಳನ್ನು ಪರಿಶೀಲಿಸಲು ನಾವು ತಕ್ಷಣ ಮೂರು ಸದಸ್ಯರ ಸಮಿತಿಯನ್ನು ರಚಿಸಿದ್ದೇವೆ. ಸಂಪೂರ್ಣ ತನಿಖೆ ಮಾಡದೇ ಯೋಜನೆಯ ಯಾವುದೇ ಪ್ರಯೋಜನಗಳನ್ನು ಫಲಾನುಭವಿಗಳಿಗೆ ವರ್ಗಾಯಿಸಲಾಗುವುದಿಲ್ಲ" ಎಂದು ಅವರು ಹೇಳಿದರು.
 

SCROLL FOR NEXT