ದೇಶ

ಫೆಬ್ರವರಿ 10ರವರೆಗೆ ಬಜೆಟ್ ಅಧಿವೇಶನ ವಿಸ್ತರಣೆ, ಭಾರತದ ಆರ್ಥಿಕ ಸ್ಥಿತಿ ಕುರಿತು ಶ್ವೇತಪತ್ರ: ಕೇಂದ್ರ ಸರ್ಕಾರ

Srinivasamurthy VN

ನವದೆಹಲಿ: ಹಾಲಿ ನಡೆಯುತ್ತಿರುವ ಸಂಸತ್ತಿನ ಬಜೆಟ್ ಅಧಿವೇಶನವನ್ನು ಶನಿವಾರದವರೆಗೆ ವಿಸ್ತರಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈ ಕುರಿತು ಲೋಕಸಭೆಯಲ್ಲಿ ಮಾಹಿತಿ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಹಾಲಿ ನಡೆಯುತ್ತಿರುವ ಸಂಸತ್ತಿನ ಬಜೆಟ್ ಅಧಿವೇಶನವನ್ನು  ಒಂದು ದಿನ ಹೆಚ್ಚುವರಿಯಾಗಿ ಅಂದರೆ ಶನಿವಾರದವರೆಗೂ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಜನವರಿ 31 ರಂದು ಆರಂಭವಾದ ಅಧಿವೇಶನವು ಫೆಬ್ರುವರಿ 9 ರಂದು ಕೊನೆಗೊಳ್ಳಬೇಕಿತ್ತು. ಆದರೆ ಇದೀಗ ಕೇಂದ್ರ ಸರ್ಕಾರ ಒಂದು ದಿನ ವಿಸ್ತರಣೆ ಮಾಡಿದೆ.

ಅಂತೆಯೇ 2014ರ ಮೊದಲು ಮತ್ತು ನಂತರದ ಭಾರತೀಯ ಆರ್ಥಿಕತೆಯ ಸ್ಥಿತಿಯನ್ನು ಹೋಲಿಸಿ 'ಶ್ವೇತಪತ್ರ'ವನ್ನು ಮಂಡಿಸಲು ಸರ್ಕಾರ ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.

ಮಧ್ಯಂತರ ಬಜೆಟ್ ಭಾಷಣದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2014 ರ ಮೊದಲು ಮತ್ತು ನಂತರದ ಭಾರತದ ಆರ್ಥಿಕ ಸ್ಥಿತಿಯನ್ನು ಹೋಲಿಸಿ ಕೇಂದ್ರ ಸರ್ಕಾರವು 'ಶ್ವೇತಪತ್ರ' ಬಿಡುಗಡೆ ಮಾಡಲಿದೆ ಎಂದು ಹೇಳಿದ್ದರು.

"ಆ ವರ್ಷಗಳ ಬಿಕ್ಕಟ್ಟನ್ನು ನಿವಾರಿಸಲಾಗಿದೆ, ಮತ್ತು ಆರ್ಥಿಕತೆಯು ಸರ್ವತೋಮುಖ ಅಭಿವೃದ್ಧಿಯೊಂದಿಗೆ ಹೆಚ್ಚಿನ ಸಮರ್ಥನೀಯ ಬೆಳವಣಿಗೆಯ ಹಾದಿಯಲ್ಲಿ ದೃಢವಾಗಿ ಇರಿಸಲ್ಪಟ್ಟಿದೆ. 2014ರ ವರೆಗೆ ನಾವು ಎಲ್ಲಿದ್ದೆವು ಮತ್ತು ಈಗ ಎಲ್ಲಿದ್ದೇವೆ ಎಂದು ನೋಡುವುದು ಈಗ ಸೂಕ್ತವಾಗಿದ್ದು, ಆ ವರ್ಷಗಳ ದುರಾಡಳಿತದಿಂದ ಪಾಠ ಕಲಿಯುವ ಉದ್ದೇಶದಿಂದ ಮಾತ್ರ ಸರ್ಕಾರವು ಸದನದ ಮೇಜಿನ ಮೇಲೆ ಶ್ವೇತಪತ್ರವನ್ನು ತರುತ್ತಿದೆ ಎಂದು ಕೇಂದ್ರ ವಿತ್ತ ಹಣಕಾಸು ಸಚಿವರು ಫೆಬ್ರವರಿ 1 ರಂದು ತಮ್ಮ ಭಾಷಣದಲ್ಲಿ ಹೇಳಿದ್ದರು.
 

SCROLL FOR NEXT