ದೇಶ

ಪ್ರಧಾನಿ ಮೋದಿ ಹುಟ್ಟಿನಿಂದ ಒಬಿಸಿ ಅಲ್ಲ: ರಾಹುಲ್ ಗಾಂಧಿ ಗಂಭೀರ ಆರೋಪ

Lingaraj Badiger

ಜಾರಸುಗುಡ: ಪ್ರಧಾನಿ ನರೇಂದ್ರ ಮೋದಿ ಅವರು ಇತರೆ ಹಿಂದುಳಿದ ವರ್ಗದ ಕುಟುಂಬದಲ್ಲಿ ಜನಿಸಿಲ್ಲ. ತಮ್ಮನ್ನು ತಾವು ಒಬಿಸಿ ಎಂದು ಬಂಬಿಸಿಕೊಳ್ಳುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ಗಂಭೀರ ಆರೋಪ ಮಾಡಿದ್ದಾರೆ.

ಒಡಿಶಾದ ಜಾರಸುಗುಡದಲ್ಲಿ ತಮ್ಮ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಮೂರನೇ ಮತ್ತು ಮುಕ್ತಾಯದ ದಿನದಂದು ಸಂಕ್ಷಿಪ್ತ ಭಾಷಣ ಮಾಡಿದ ರಾಹುಲ್ ಗಾಂಧಿ, ಮೋದಿ ಅವರು ಮೇಲ್ಜಾತಿಗೆ ಸೇರಿದ ಕುಟುಂಬದಲ್ಲಿ ಜನಿಸಿದರು. ಆದರೆ ಮೋದಿ, ತಾವು ಒಬಿಸಿ ಎಂದು ಹೇಳುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದರು.

ಮೋದಿ, 2000ರಲ್ಲಿ ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಬಿಸಿ ಪಟ್ಟಿಗೆ ಸೇರಿಸಲ್ಪಟ್ಟ ತೇಲಿ ಜಾತಿಯ ಕುಟುಂಬದಲ್ಲಿ ಜನಿಸಿದವರು. ಆದ್ದರಿಂದ ಮೋದಿ ಹುಟ್ಟಿನಿಂದ ಒಬಿಸಿ ಅಲ್ಲ ಎಂದು ಕಾಂಗ್ರೆಸ್ ಸಂಸದರು ಪ್ರತಿಪಾದಿಸಿದರು.

ಪ್ರಧಾನಿ ಮೋದಿ ಒಬಿಸಿಗಳೊಂದಿಗೆ ಕೈಕುಲುಕುವುದಿಲ್ಲ. ಆದರೆ ಕೋಟ್ಯಾಧಿಪತಿಗಳನ್ನು ಅಪ್ಪಿಕೊಳ್ಳುತ್ತಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.

ಬಿಳಿ ಟೀ ಶರ್ಟ್ ಧರಿಸಿದ್ದ ಮಾಜಿ ಕಾಂಗ್ರೆಸ್ ಅಧ್ಯಕ್ಷ, ಇಂದು ಇಲ್ಲಿನ ಹಳೆ ಬಸ್ ನಿಲ್ದಾಣದಿಂದ ಯಾತ್ರೆಯನ್ನು ಪುನರಾರಂಭಿಸಿದರು. ಅವರ ಜೊತೆ ಎಐಸಿಸಿ ನಾಯಕ ಅಜೋಯ್ ಕುಮಾರ್ ಮತ್ತು ಒಪಿಸಿಸಿ ಅಧ್ಯಕ್ಷ ಶರತ್ ಪಟ್ಟನಾಯಕ್ ಇದ್ದರು. ಯಾತ್ರೆಯು ಇಂದು ಮಧ್ಯಾಹ್ನ ಒಡಿಶಾದಿಂದ ಛತ್ತೀಸ್‌ಗಢವನ್ನು ಪ್ರವೇಶಿಸಲಿದೆ.

SCROLL FOR NEXT