ದೇಶ

ಉತ್ತರಾಖಂಡ: ಹಲ್ದ್ವಾನಿ ಹಿಂಸಾಚಾರ 'ಕೋಮು ಗಲಭೆ ಅಲ್ಲ'

Lingaraj Badiger

ಹಲ್ದ್ವಾನಿ: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಅಕ್ರಮ ಮದರಸಾ ಮತ್ತು ಪಕ್ಕದ ಮಸೀದಿ ತೆರವುಗೊಳಿಸಿದ ನಂತರ ನಡೆದ ಹಿಂಸಾಚಾರದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು 100 ಪೊಲೀಸರು ಸೇರಿದಂತೆ 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 

ಹಲ್ದ್ವಾನಿ ಹಿಂಸಾಚಾರದ ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ನೈನಿತಾಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ವಂದನಾ ಸಿಂಗ್ ಅವರು, ಆರೋಪಿಗಳನ್ನು ಗುರುತಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಇದು ಕೋಮು ಗಲಭೆಯಲ್ಲ ಎಂದು ಒತ್ತಿ ಹೇಳಿದ ಸಿಂಗ್, ಇದನ್ನು ಕೋಮುವಾದ ಅಥವಾ ಸೂಕ್ಷ್ಮ ವಿಷಯವನ್ನಾಗಿ ಮಾಡದಂತೆ ಜನತೆಗೆ ಮನವಿ ಮಾಡಿದರು. ಅಲ್ಲದೆ ಪ್ರತೀಕಾರದಲ್ಲಿ ಯಾವುದೇ ನಿರ್ದಿಷ್ಟ ಸಮುದಾಯ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

"ಜನಸಮೂಹದಿಂದ ಪೊಲೀಸ್ ಠಾಣೆಗೆ ಸಂಪೂರ್ಣ ಹಾನಿಯಾಗಿದೆ... ಇದೊಂದು ದುರದೃಷ್ಟಕರ ಘಟನೆ. ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದು(ಘಟನೆ) ಕೋಮು ಗಲಭೆ ಅಲ್ಲ. ಇದನ್ನು ಕೋಮುವಾದ ಅಥವಾ ಸೂಕ್ಷ್ಮ ವಿಚಾರವಾಗಿಸಬೇಡಿ ಎಂದು ನಾನು ಪ್ರತಿಯೊಬ್ಬರಲ್ಲಿ ವಿನಂತಿಸುತ್ತೇನೆ. ಯಾವುದೇ ನಿರ್ದಿಷ್ಟ ಸಮುದಾಯವು ಪ್ರತೀಕಾರ ತೀರಿಸಿಕೊಂಡಿಲ್ಲ ... ಇದು ರಾಜ್ಯದ ಆಡಳಿತ, ರಾಜ್ಯ ಸರ್ಕಾರ ಮತ್ತು ಕಾನೂನು, ಸುವ್ಯವಸ್ಥೆಗೆ ಸವಾಲು ಹಾಕುವ ಪ್ರಯತ್ನವಾಗಿದೆ ... ಸಂಜೆ ಮತ್ತಷ್ಟು ಮಾಹಿತಿ ನೀಡಲಾಗುವುದು” ಎಂದು ಅವರು ಹೇಳಿದ್ದಾರೆ.

ನೈನಿತಾಲ್ ಡಿಎಂ ವಂದನಾ ಸಿಂಗ್ ಅವರು ಶುಕ್ರವಾರ ಮಾಧ್ಯಮಗಳನ್ನು ಉದ್ದೇಶಿಸಿ, ಅತಿಕ್ರಮಣ ವಿರೋಧಿ ಅಭಿಯಾನದ ನಂತರ ಹಲ್ದ್ವಾನಿಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ವಿವರಗಳನ್ನು ನೀಡಿದರು.

ಅಧಿಕೃತ ಮಾಹಿತಿಯ ಪ್ರಕಾರ, ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಡಿಎಂ ಸಿಂಗ್ ಖಚಿತಪಡಿಸಿದ್ದಾರೆ.

SCROLL FOR NEXT