ದೇಶ

ಲೋಕಸಭೆ ಚುನಾವಣೆಗೂ ಮುನ್ನಾ ಸಿಎಎ ಜಾರಿಗೆ: ಅಮಿತ್ ಶಾ 

Nagaraja AB

ನವದೆಹಲಿ: ಡಿಸೆಂಬರ್ 2019 ರಲ್ಲಿ ಸಂಸತ್ತು ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಮುಂಬರುವ ಲೋಕಸಭೆ ಚುನಾವಣೆಗೂ ಮುನ್ನಾ ಅಧಿಸೂಚನೆ ಹೊರಡಿಸಿ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ.

ಇಟಿ ನೌ-ಗ್ಲೋಬಲ್ ಬ್ಯುಸಿನೆಸ್ ಶೃಂಗಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ಸಿಎಎ ದೇಶದ ಕಾಯ್ದೆ,  ಖಂಡಿತವಾಗಿಯೂ  ಚುನಾವಣೆಗೂ ಮುನ್ನಾವೇ ಅದರ ಅಧಿಸೂಚನೆ ಹೊರಡಿಸಲಾಗುವುದು, ಚುನಾವಣೆಯ ಮೂಲಕ ಸಿಎಎ ಜಾರಿಗೆ ತರಲಾಗುವುದು ಮತ್ತು ಅದರ ಸುತ್ತಲೂ ಯಾವುದೇ ಗೊಂದಲ ಇರಬಾರದು ಎಂದರು.

"ಸಿಎಎ ಕಾಂಗ್ರೆಸ್ ಸರ್ಕಾರದ ಭರವಸೆಯಾಗಿತ್ತು. ದೇಶ ವಿಭಜನೆಯಾದಾಗ ಮತ್ತು ಆ ದೇಶಗಳಲ್ಲಿ ಅಲ್ಪಸಂಖ್ಯಾತರು ಕಿರುಕುಳಕ್ಕೊಳಗಾದಾಗ, ನಿರಾಶ್ರಿತರಿಗೆ ಭಾರತದಲ್ಲಿ ಸ್ವಾಗತವಿದೆ ಮತ್ತು ಅವರಿಗೆ ಭಾರತೀಯ ಪೌರತ್ವವನ್ನು ನೀಡಲಾಗುವುದು ಎಂದು ಕಾಂಗ್ರೆಸ್ ಭರವಸೆ ನೀಡಿತ್ತು. ಈಗ ಅವರು ಹಿಂದೆ ಸರಿಯುತ್ತಿದ್ದಾರೆ. ಪೌರತ್ವ ಒದಗಿಸಲು ಸಿಎಎ ಜಾರಿಗೆ ತರಲಾಗುತ್ತಿದೆಯೇ ಹೊರತು ಯಾರ ಪೌರತ್ವವನ್ನು ಕಸಿದುಕೊಳ್ಳಲು ಅಲ್ಲ ಎಂದು ಅವರು ಸ್ಪಷ್ಪಪಡಿಸಿದರು. 

"ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರು, ವಿಶೇಷವಾಗಿ ಮುಸ್ಲಿಂ ಸಮುದಾಯವನ್ನು ಪ್ರಚೋದಿಸಲಾಗುತ್ತಿದೆ. ಸಿಎಎ ಮೂಲಕ ಯಾರ ಪೌರತ್ವವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಏಕೆಂದರೆ ಕಾಯ್ದೆಯಲ್ಲಿ ಅದಕ್ಕೆ ಯಾವುದೇ ಅವಕಾಶವಿಲ್ಲ. ಸಿಎಎ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಕಿರುಕುಳಕ್ಕೊಳಗಾದ ನಿರಾಶ್ರಿತರಿಗೆ ಪೌರತ್ವವನ್ನು ಒದಗಿಸುವ ಕಾಯ್ದೆ ಎಂದರು. 

ಡಿಸೆಂಬರ್ 31, 2014ಕ್ಕೂ ಮುನ್ನಾ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು ಸೇರಿದಂತೆ ಕಿರುಕುಳಕ್ಕೊಳಗಾದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವವನ್ನು ನೀಡುವ ಗುರಿಯನ್ನು ಸಿಎಎ ಹೊಂದಿದೆ.  ಡಿಸೆಂಬರ್ 2019 ರಲ್ಲಿ ಸಿಎಎ ಅನ್ನು ಸಂಸತ್ತು ಅಂಗೀಕರಿಸಿ, ರಾಷ್ಟ್ರಾಧ್ಯಕ್ಷರು ಅಂಕಿತ ಹಾಕಿದ ನಂತರ ದೇಶದ ವಿವಿಧ ಭಾಗಗಳಲ್ಲಿ ಗಮನಾರ್ಹ ಪ್ರತಿಭಟನೆಗಳು ಭುಗಿಲೆದ್ದವು.

SCROLL FOR NEXT