ದೇಶ

ರೈತರ 'ದೆಹಲಿ ಚಲೋ' ಪ್ರತಿಭಟನೆ: ದೆಹಲಿಯಲ್ಲಿ ಸೆಕ್ಷನ್ 144 ಜಾರಿ, ಬ್ಯಾರಿಕೇಡ್‌-ತಂತಿಗಳಿಂದ ಗಡಿಭಾಗಗಳು ಬಂದ್‌

Manjula VN

ನವದೆಹಲಿ: ವಿವಿಧ ಬೇಡಿಕೆಗಳನ್ನು ಪೂರೈಸುವಂತೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸೇರಿದಂತೆ ಹಲವು ರೈತ ಸಂಘಟನೆಗಳು ದೆಹಲಿ ಚಲೋ ಮೆರವಣಿಗೆಯನ್ನು ಮಂಗಳವಾರ ಆರಂಭಿಸಿದ್ದು, ಪ್ರತಿಭಟನೆ ತಡೆಯಲು ಹೆದ್ದಾರಿಯಲ್ಲಿ ಹಾಕಲಾಗಿದ್ದ ತಡೆಗೋಡೆಯನ್ನು ರೈತರು ದ್ವಂಸ ಮಾಡಿ ಘಗ್ಗರ್ ನದಿಗೆ ಎಸೆದಿದ್ದಾರೆ.

ಬಳಿಕ ಘಗ್ಗರ್ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ದಾಟಿ ರೈತರು ಮುಂದೆ ಸಾಗಿದ್ದಾರೆ. ಆದರೆ, ಹರಿಯಾಣದ ಗಡಿಗೆ ಬರುವುದು ಇನ್ನು ಕಠಿಣ ಸವಾಲಾಗಿದೆ.

ಹಲವು ದಿನಗಳಿಂದ ರೈತ ಸಂಘಟನೆಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಹತ್ತಿಕ್ಕಲು ಪಂಜಾಬ್‌ನ ಗಡಿಯಲ್ಲಿರುವ ಅಂಬಾಲಾ, ಜಿಂದ್, ಫತೇಹಾಬಾದ್, ಕುರುಕ್ಷೇತ್ರ ಮತ್ತು ಸಿರ್ಸಾದಲ್ಲಿ ಬ್ಯಾರಿಕೇಡ್​ಗಳನ್ನು ಹಾಕಿದ್ದರೆ, ರಸ್ತೆಗಳ ಮೇಲೆ ಕಬ್ಬಿಣದ ಮೊಳೆಗಳು ಮತ್ತು ಮುಳ್ಳುತಂತಿಗಳನ್ನು ಅಳವಡಿಸಲಾಗಿದೆ.

ಇದರಿಂದ ರೈತರ ಟ್ರ್ಯಾಕ್ಟರ್​ಗಳು ದೆಹಲಿಗೆ ಪ್ರವೇಶಿಸದಂತೆ ತಡೆ ಒಡ್ಡಲಾಗುತ್ತಿದೆ. ಈ ಮಧ್ಯೆ ದೆಹಲಿ ಚಲೋ ಬೆಂಬಲಿಸಿ ಕರ್ನಾಟಕ, ಮಧ್ಯಪ್ರದೇಶ ಸೇರಿದಂತೆ ಇತರ ರಾಜ್ಯಗಳಿಂದ ಬರುತ್ತಿರುವ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಂಬಲ ಬೆಲೆ ಖಾತ್ರಿಪಡಿಸುವ ಕಾನೂನು ಜಾರಿಯಾಗಬೇಕು, ಸ್ವಾಮಿನಾಥನ್ ವರದಿ ಜಾರಿಯಾಗಬೇಕು, ರೈತರಿಗೆ ಪಿಂಚಣಿ ಸೌಲಭ್ಯ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ದೆಹಲಿ ಚಲೋ ಪ್ರತಿಭಟನೆಯಲ್ಲಿ ರೈತರು ಪಂಜಾಬ್, ಹರಿಯಾಣ, ಉತ್ತರಪ್ರದೇಶದಿಂದಲೂ ದೆಹಲಿಗೆ ಪ್ರವೇಶಿಸಲಿದ್ದಾರೆ. ಈ ಪ್ರತಿಭಟನೆಯಲ್ಲಿ ಕರ್ನಾಟಕದಿಂದಲೂ ರೈತ ಮುಖಂಡ ಕುರುಬೂರು ಶಾಂತಕುಮಾರ್ ಭಾಗಿಯಾಗಲಿದ್ದಾರೆ. ಈ ರೈತ ಹೋರಾಟದಲ್ಲಿ ಸುಮಾರು 200 ಸಂಘಟನೆಗಳಿಂದ 25,000 ರೈತರು ಪಾಲ್ಗೊಳ್ಳುವ ಸಾಧ್ಯತೆಗಳಿವೆ.

ಅಧಿಕ ಸಂಖ್ಯೆಯಲ್ಲಿ ರೈತರು ಪಾಲ್ಗೊಳ್ಳುವುದರಿಂದ ಯಾವುದೇ ಅಹಿತಕರ ಘಟನೆಯನ್ನು ತಡೆಯಲು ದೆಹಲಿ ಪೊಲೀಸರು ಸೆಕ್ಷನ್‌ 144 ಜಾರಿಗೊಳಿಸಿದ್ದಾರೆ. ಜೊತೆಗೆ ರಾಜಧಾನಿಯಲ್ಲಿ ಎಲ್ಲಾ ರೀತಿಯ ರ‍್ಯಾಲಿ, ಮೆರವಣಿಗೆ, ರಸ್ತೆ ಮಾರ್ಗಗಳನ್ನ ನಿರ್ಬಂಧಿಸಲಾಗಿದೆ. ಟ್ಯಾಕ್ಟರ್‌ಗಳಲ್ಲಿ ಜನರನ್ನು ತುಂಬಿಕೊಂಡು ಹೋಗುವುದಕ್ಕೂ ನಿಷೇಧ ಹೇರಲಾಗಿದೆ. ಮಾರ್ಚ್‌ 12ರ ವರೆಗೂ ಈ ಕ್ರಮ ಇದೇ ರೀತಿ ಮುಂದುವರಿಯಲಿದೆ. ಸಿಂಘು, ಘಾಜಿಪುರ, ಟಿಕ್ರಿ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೂ ದೆಹಲಿ ಚಲೋ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಕರ್ನಾಟಕದಿಂದ ಆಗಮಿಸುತ್ತಿದ್ದ ರೈತರು, ರೈತ ಮಹಿಳೆಯರ ಮೇಲೆ ಮಧ್ಯಪ್ರದೇಶದ ಪೊಲೀಸರು ಬಲವಂತವಾಗಿ ಬೆದರಿಸಿ ದಬ್ಬಾಳಿಕೆ ನಡೆಸಿದ್ದಾರೆಂಬ ಆರೋಪಗಳು ಕೇಳಿ ಬಂದಿವೆ.

ಘಟನೆಯಲ್ಲಿ ಗಾಯಗೊಂಡ ರೈತರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನೂ ಕೊಡಿಸದೇ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಆರೋಪಿಸಿದ್ದಾರೆ.

ಅಲ್ಲದೇ ಪ್ರತಿಭಟನೆಗೆ ತೆರಳುತ್ತಿದ್ದ ಬೆಳಗಾವಿ ಜಿಲ್ಲೆಯ ಗುರುಸಿದ್ದಪ್ಪ, ಧಾರವಾಡ ಜಿಲ್ಲೆಯ ಪರಶುರಾಮ್, ಚಾಮರಾಜನಗರ ಜಿಲ್ಲೆಯ ಪಟೇಲ್ ಶಿವಮೂರ್ತಿ, ಮೂಕಳ್ಳಿ ಮಾದೇವಸ್ವಾಮಿ, ಹಾಸನ ಜಿಲ್ಲೆಯ ಧರ್ಮರಾಜ್, ಮೈಸೂರು ಜಿಲ್ಲೆಯ ಬರಡನಪುರ ನಾಗರಾಜ್, ಮಹೇಶ್, ಉಡಿಗಾಲ ರೇವಣ್ಣ, ಕುರುಬೂರು ಸಿದ್ದೇಶ್, ಗುರುಸ್ವಾಮಿ, ಗೌರಿಶಂಕರ್,ಕಮಲಮ್ಮ, ಪ್ರೇಮ, ಮಮತಾ, ಶ್ವೇತಾ, ನಾಗವೇಣಿ, ಪ್ರದೀಪ್ ಕುರುಬೂರು, ಮಂಜೇಶ್ ಸೇರಿ ನೂರಕ್ಕೂ ಅಧಿಕ ರೈತರನ್ನು ಸೋಮವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಶಾಂತಕುಮಾರ್‌ ದೂರಿದ್ದಾರೆ.

SCROLL FOR NEXT