ದೇಶ

2ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ: ತ.ನಾಡು ರೈತರ ಬೆಂಬಲ, ಈಗಲೂ ಮಾತುಕತೆಗೆ ಸಿದ್ಧ ಎಂದ ಕೇಂದ್ರಸರ್ಕಾರ

Srinivasamurthy VN

ನವದೆಹಲಿ: ಕನಿಷ್ಠ ಬೆಂಬಲ ಬೆಲ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜದಾನಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ 2ನೇ ದಿನಕ್ಕೆ ಕಾಲಿಟ್ಟಿದ್ದು, ರೈತರ ಪ್ರತಿಭಟನೆಗೆ ತಮಿಳುನಾಡು ರೈತರು ಕೂಡ ಬೆಂಬಲ ಘೋಷಣೆ ಮಾಡಿದ್ದಾರೆ.

ಪಂಜಾಬ್‌ನ ರೈತರು ಹರಿಯಾಣದ ಅಂಬಾಲಾ ನಗರಕ್ಕೆ ಸಮೀಪವಿರುವ ಶಂಭು ಗಡಿಯಿಂದ ಬುಧವಾರ ರಾಷ್ಟ್ರ ರಾಜಧಾನಿಗೆ ತಮ್ಮ ಪ್ರತಿಭಟನಾ ಮೆರವಣಿಗೆಯನ್ನು ಪುನರಾರಂಭಿಸಲು ಸಿದ್ಧರಾಗಿದ್ದಾರೆ. ಮಂಗಳವಾರ ಉಭಯ ರಾಜ್ಯಗಳ ನಡುವಿನ ಎರಡು ಗಡಿಗಳಲ್ಲಿ ಪ್ರತಿಭಟನಾಕಾರರು ಹರಿಯಾಣ ಪೊಲೀಸರೊಂದಿಗೆ ಮುಖಾಮುಖಿಯಾಗಿದ್ದರು. ಕೆಲವು ಪ್ರತಿಭಟನಾಕಾರರು  ಬ್ಯಾರಿಕೇಡ್ ಗಳನ್ನು ಮುರಿದು ದೆಹಲಿ ಪ್ರವೇಶಕ್ಕೆ ಯತ್ನಿಸಿದರು. ಈ ವೇಳೆ ಪೊಲೀಸರು ಅಶ್ರುವಾಯು ಮತ್ತು ಜಲ ಫಿರಂಗಿಗಳನ್ನು ಬಳಸಿ ಅವರನ್ನು ನಿಯಂತ್ರಿಸುವ ಪ್ರಯತ್ನ ಮಾಡಿದರು. ಹರಿಯಾಣದ ಜಿಂದ್ ಜಿಲ್ಲೆಯ ಗಡಿಯಲ್ಲಿ ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿಗಳನ್ನು ಬಳಸಿದರು.

ಇಂದು ಮತ್ತೆ 10 ಸಾವಿರಕ್ಕೂ ಅಧಿಕರ ರೈತರೊಂದಿಗೆ ದೆಹಲಿ ಪ್ರವೇಶ
ಇನ್ನು ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವಾನ್ ಸಿಂಗ್ ಪಂಧೇರ್ ಈ ಬಗ್ಗೆ ಮಾತನಾಡಿದ್ದು, ಭದ್ರತಾ ಪಡೆಗಳ ಬೆದರಿಕೆಗೆ ನಾವು ಜಗ್ಗುವುದಿಲ್ಲ. ಬುಧವಾರ ಮತ್ತೆ ಶಂಭು ಗಡಿ ಬಳಿ ಸುಮಾರು 10,000 ಪ್ರತಿಭಟನಾಕಾರರೊಂದಿಗೆ ನಮ್ಮ ಪ್ರತಿಭಟನಾ ರ್ಯಾಲಿ ಮುಂದುವರೆಸುತ್ತೇವೆ. ಕೇಂದ್ರ ನಮ್ಮ ಬೇಡಿಕೆಗಳನ್ನು ಒಪ್ಪುವವರೆಗೂ ಪ್ರತಿಭಟನೆ ಮುಂದುವರಿಯಲಿದೆ ಎಂದು ಹೇಳಿದರು.

ತ.ನಾಡು ರೈತರ ಬೆಂಬಲ
ಏತನ್ಮಧ್ಯೆ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ತಮಿಳುನಾಡು ರೈತರು ಕೂಡ ಬೆಂಬಲ ಘೋಷಣೆ ಮಾಡಿದ್ದು, ತಮಿಳುನಾಡು ರೈತ ಮುಖಂಡ ಪಿ ಅಯ್ಯಕಣ್ಣು ನೇತೃತ್ವದಲ್ಲಿ ತಿರುಚ್ಚಿಯಲ್ಲಿ ಮಂಗಳವಾರ ರೋಡ್ ರೋಕೋ ಪ್ರತಿಭಟನೆ ನಡೆಸಿ ದೆಹಲಿಗೆ ತೆರಳುತ್ತಿರುವ ರೈತರನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದರು. ರೈತರ ಆದಾಯ ದ್ವಿಗುಣಗೊಳಿಸುವುದು ಮತ್ತು ಕನಿಷ್ಠ ಬೆಂಬಲ ಬೆಲೆ ಖಾತ್ರಿಯಂತಹ ಭರವಸೆಗಳನ್ನು ಈಡೇರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇದೇ ವೇಳೆ ಒತ್ತಾಯಿಸಿದರು. ಅಲ್ಲದೆ ಸರ್ಕಾರ ಸ್ಪಂದಿಸದೇ ಹೋದರು ತಾವು ನಗ್ನ ಮೆರವಣಿಗೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಈಗಲೂ ಮಾತುಕತೆಗೆ ಸಿದ್ಧ ಎಂದ ಕೇಂದ್ರಸರ್ಕಾರ
ರೈತರ ಪ್ರತಿಭಟನೆ ಮತ್ತೆ ಉಲ್ಬಣವಾದ ಬೆನ್ನಲ್ಲೇ ಇತ್ತ ಕೇಂದ್ರ ಸರ್ಕಾರ ಕೂಡ ತಾವು ಈಗಲೂ ರೈತರೊಂದಿಗೆ ಮಾತುಕತೆಗೆ ಸಿದ್ಧ ಎಂದು ಘೋಷಣೆ ಮಾಡಿದೆ. ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಮಂಗಳವಾರ ಪ್ರತಿಭಟನಾ ನಿರತ ರೈತ ಸಂಘಟನೆಗಳಿಗೆ ಈ ಬಗ್ಗೆ ಸರ್ಕಾರದೊಂದಿಗೆ ರಚನಾತ್ಮಕ ಚರ್ಚೆ ನಡೆಸುವಂತೆ ಒತ್ತಾಯಿಸಿದರು. 

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಮತ್ತು ಸಾಲ ಮನ್ನಾ ಸೇರಿದಂತೆ ತಮ್ಮ ಬೇಡಿಕೆಗಳಿಗಾಗಿ ಕೇಂದ್ರದ ಮೇಲೆ ಒತ್ತಡ ಹೇರಲು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ 'ದೆಹಲಿ ಚಲೋ' ಆಂದೋಲನವನ್ನು ಮುನ್ನಡೆಸುತ್ತಿದೆ.
 

SCROLL FOR NEXT