ದೇಶ

'ನಮ್ಮ ಬಿಡುಗಡೆಯಲ್ಲಿ ಪ್ರಧಾನಿ ಮೋದಿ ಖುದ್ದು ಭಾಗಿಯಾಗಿದ್ದರು' ಭಾರತಕ್ಕೆ ಮರಳಿದ ನೌಕಾಪಡೆ ಯೋಧನ ಮನದಾಳದ ಮಾತು...

Sumana Upadhyaya

ನವದೆಹಲಿ: ಕತಾರ್‌ನಿಂದ(Qatar Indians) ಬಿಡುಗಡೆಯಾದ ಎಂಟು ಮಂದಿ ಭಾರತೀಯ ನೌಕಾಪಡೆಯ ಯೋಧರಲ್ಲಿ ಒಬ್ಬರಾದ ಸೌರಭ್ ವಶಿಷ್ಟ್ ಅವರು ಉತ್ತರಾಖಂಡದಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಕೂಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನಾವು ಭಾರತಕ್ಕೆ ಮರಳಿರುವ ಖುಷಿಯನ್ನು ಪದಗಳಲ್ಲಿ ವಿವರಿಸುವುದು ಕಷ್ಟ, ಕಳೆದ 17 ತಿಂಗಳುಗಳಿಂದ, ನಾವು ಯಾವಾಗ ಮನೆಗೆ ಮರಳುತ್ತೇವೆ ಎಂದು ನಾವು ಮತ್ತು ನಮ್ಮ ಕುಟುಂಬ ಸದಸ್ಯರು ಕಾಯುತ್ತಿದ್ದೆವು. ಇದು ಅಂತ್ಯವಿಲ್ಲದ ಸಂತೋಷವಾಗಿದೆ. ಇದಕ್ಕೆ ಕಾರಣರಾದ ಎಲ್ಲರಿಗೂ ನನ್ನ ಕೃತಜ್ಞತೆ ಹೇಳುತ್ತೇನೆ. ದೇಶದ ಬೆಂಬಲ ಮತ್ತು ಪ್ರಧಾನಿ ಮೋದಿಯವರ ವೈಯಕ್ತಿಕ ಒಳಗೊಳ್ಳುವಿಕೆ ಇಲ್ಲದೆ ಇದು ಸಾಧ್ಯವಾಗಿಲ್ಲ ಎಂದಿದ್ದಾರೆ.

ಇದರ ಸಂಪೂರ್ಣ ಕ್ರೆಡಿಟ್ ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಭಾರತೀಯ ರಾಯಭಾರ ಕಚೇರಿಗೆ ಸಲ್ಲಬೇಕು ಎಂದಿದ್ದಾರೆ. 

ವಶಿಷ್ಠ ಅವರ ತಂದೆ ಮಾತನಾಡಿ, ನಾನು ಪ್ರಧಾನಿ ನರೇಂದ್ರ ಮೋದಿ ಮತ್ತು ಇಎಎಂ ಎಸ್ ಜೈಶಂಕರ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅವರು ಅಸಾಧ್ಯವಾದುದನ್ನು ಸಾಧ್ಯವಾಗಿಸಿದ್ದಾರೆ. ನಾವು ವಿದೇಶಾಂಗ ಸಚಿವರೊಂದಿಗೆ  ನಿಯಮಿತವಾಗಿ ಮಾತನಾಡುತ್ತಿದ್ದೆವು. ಅವರು ಎಲ್ಲಾ 8 ಅಧಿಕಾರಿಗಳನ್ನು ಸುರಕ್ಷಿತವಾಗಿ ಮನೆಗೆ ಕರೆತರುವ ಭರವಸೆಯನ್ನು ಈಡೇರಿಸಿದ್ದಾರೆ ಎಂದರು. 

ವಶಿಷ್ಠರ ಪತ್ನಿ ಮಾತನಾಡಿ, ಆರಂಭದಿಂದಲೂ ಭಾರತ ಸರ್ಕಾರ ನಮ್ಮನ್ನು ಬೆಂಬಲಿಸಿದೆ. ಎಲ್ಲಾ 8 ಮಂದಿಯನ್ನು ಕರೆತರಲು ಶೇಕಡಾ 100ರಷ್ಟು ಪ್ರಯತ್ನ ಹಾಕುವುದಾಗಿ ಆರಂಭದಲ್ಲಿಯೇ ಹೇಳಿದ್ದರು.  ಕೊಟ್ಟ ಭರವಸೆಯನ್ನು ಉಳಿಸಿಕೊಂಡಿದ್ದಾರೆ. ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಎಸ್ ಜೈಶಂಕರ್, ಕತಾರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಇಡೀ ಸರ್ಕಾರವು ತುಂಬಾ ಬೆಂಬಲ ನೀಡಿತು, ನಮಗೆ ಹೊಸ ಜೀವನ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದರು. 

ಬೇಹುಗಾರಿಕೆ ಆರೋಪದ ಮೇಲೆ ಕತಾರ್ ಜೈಲಿನಲ್ಲಿದ್ದ ಎಂಟು ಮಾಜಿ ಭಾರತೀಯ ನೌಕಾಪಡೆಯ ಸಿಬ್ಬಂದಿಯನ್ನು ಬಿಡುಗಡೆ ಮಾಡಲಾಗಿದ್ದು, ಇದು ಭಾರತಕ್ಕೆ ಪ್ರಮುಖ ರಾಜತಾಂತ್ರಿಕ ವಿಜಯವೆಂದು ಪರಿಗಣಿಸಲ್ಪಟ್ಟಿದೆ. ಕತಾರ್ ನ್ಯಾಯಾಲಯವು ಅವರಿಗೆ ಮರಣದಂಡನೆ ವಿಧಿಸಿದ ಸುಮಾರು ಮೂರೂವರೆ ತಿಂಗಳ ನಂತರ ಜೈಲು ಶಿಕ್ಷೆಯಾಗಿ ಪರಿವರ್ತಿಸಿ ಅಂತಿಮವಾಗಿ ಬಿಡುಗಡೆ ಮಾಡಲಾಯಿತು. 

SCROLL FOR NEXT