ರೈತರ ಪ್ರತಿಭಟನೆ
ರೈತರ ಪ್ರತಿಭಟನೆ PTI
ದೇಶ

ಐದನೇ ದಿನಕ್ಕೆ ಕಾಲಿಟ್ಟ ದೆಹಲಿ ಚಲೋ: ಬಿಜೆಪಿ ನಾಯಕರ ನಿವಾಸದ ಹೊರಗಡೆ ರೈತರ ಪ್ರತಿಭಟನೆ

Nagaraja AB

ಪಂಜಾಬ್: ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತ್ರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿದ್ದು, ಶನಿವಾರ ಪಂಜಾಬಿನ ಮೂವರು ಬಿಜೆಪಿ ನಾಯಕರ ನಿವಾಸಗಳ ಹೊರಗೆ ಭಾರತಿ ಕಿಸಾನ್ ಯೂನಿಯನ್ ಧರಣಿ ನಡೆಸಲಿದೆ.

ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಬಿಜೆಪಿಯ ಪಂಜಾಬ್ ಘಟಕದ ಮುಖ್ಯಸ್ಥ ಸುನೀಲ್ ಜಾಖರ್ ಮತ್ತು ಹಿರಿಯ ನಾಯಕ ಕೇವಲ್ ಸಿಂಗ್ ಧಿಲ್ಲೋನ್ ಅವರ ಮನೆಗಳ ಹೊರಗೆ ಧರಣಿ ನಡೆಸುವುದಲ್ಲದೆ, ದೆಹಲಿ ಚಲೋ ಪ್ರತಿಭಟನೆಗೆ ಬೆಂಬಲ ಕೋರಿ ರಾಜ್ಯದ ಟೋಲ್ ಪ್ಲಾಜಾಗಳಲ್ಲಿ ಪ್ರತಿಭಟನೆ ಆಯೋಜಿಸಲಾಗಿದೆ.

ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಕರೆ ನೀಡಿರುವ 'ದೆಹಲಿ ಚಲೋ' ಮೆರವಣಿಗೆಯ ಐದನೇ ದಿನದಂದು ರೈತರು ಪಂಜಾಬ್ ಮತ್ತು ಹರಿಯಾಣದ ಎರಡು ಗಡಿ ಕೇಂದ್ರಗಳಲ್ಲಿ ತಂಗಲಿದ್ದಾರೆ.

ಪಂಜಾಬ್‌ನ ರೈತರು ಮಂಗಳವಾರ ದೆಹಲಿಗೆ ತಮ್ಮ ಮೆರವಣಿಗೆಯನ್ನು ಪ್ರಾರಂಭಿಸಿದರು ಆದರೆ ಹರಿಯಾಣ- ಪಂಜಾಬ್‌ನ ಗಡಿಯ ಶಂಭು ಮತ್ತು ಖಾನೌರಿ ಪಾಯಿಂಟ್‌ಗಳಲ್ಲಿ ಭದ್ರತಾ ಸಿಬ್ಬಂದಿ ತಡೆದರು. ಅಂದಿನಿಂದ ಎರಡು ಗಡಿ ಬಿಂದುಗಳಲ್ಲಿ ಪ್ರತಿಭಟನಾಕಾರರು ತಂಗಿದ್ದಾರೆ.

ಹರಿಯಾಣ ಮೂಲದ ಗುರ್ನಾಮ್ ಸಿಂಗ್ ಚಾರುಣಿ ನೇತೃತ್ವದ ಭಾರತೀಯ ಕಿಸಾನ್ ಯೂನಿಯನ್ (ಚಾರುಣಿ) ಶನಿವಾರ ಪ್ರತಿಭಟನಾ ನಿರತ ರೈತರೊಂದಿಗೆ ಒಗ್ಗಟ್ಟಿನಿಂದ ಟ್ರ್ಯಾಕ್ಟರ್ ರ್ಯಾಲಿ ಆಯೋಜಿಸಿದೆ. ನಾಲ್ಕನೇ ಸುತ್ತಿನ ಮಾತುಕತೆಗಾಗಿ ಕೇಂದ್ರ ಸಚಿವರಾದ ಅರ್ಜುನ್ ಮುಂಡಾ, ಪಿಯೂಷ್ ಗೋಯಲ್ ಮತ್ತು ನಿತ್ಯಾನಂದ ರೈ ಅವರು ರೈತ ಮುಖಂಡರನ್ನು ಭಾನುವಾರ ಭೇಟಿಯಾಗಲಿದ್ದಾರೆ. ಈ ಹಿಂದೆ ಫೆಬ್ರವರಿ 8, 12 ಮತ್ತು 15 ರಂದು ನಡೆದ ಮಾತುಕತೆ ವಿಫಲವಾಗಿತ್ತು.

ಶುಕ್ರವಾರ ಶಂಭು ಗಡಿಯಲ್ಲಿ ಹಲವಾರು ರೈತರ ಮೇಲೆ ಕಲ್ಲು ತೂರಾಟ ಮತ್ತು ಭದ್ರತಾ ಸಿಬ್ಬಂದಿಯನ್ನು ಪ್ರಚೋದಿಸಲು ಪ್ರಯತ್ನಿಸುತ್ತಿರುವುದನ್ನು ತೋರಿಸುವ ವೀಡಿಯೊ ತುಣುಕುಗಳ ಸರಣಿಯನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ರೈತರ ಚಳವಳಿ ನೆಪದಲ್ಲಿ ಗಲಾಟೆಗೆ ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ಪ್ರತಿಪಾದಿಸಿದ್ದಾರೆ. ರೈತರೊಂದಿಗಿನ ಘರ್ಷಣೆಯಲ್ಲಿ 25 ಭದ್ರತಾ ಸಿಬ್ಬಂದಿ -- ಹರಿಯಾಣದ 18 ಪೊಲೀಸರು ಮತ್ತು ಏಳು ಅರೆಸೇನಾ ಪಡೆಯ ಯೋಧರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

SCROLL FOR NEXT