ರಕ್ಷಣಾ ಕಾರ್ಯಾಚರಣೆ ಚಿತ್ರ
ರಕ್ಷಣಾ ಕಾರ್ಯಾಚರಣೆ ಚಿತ್ರ 
ದೇಶ

ಉತ್ತರ ಪ್ರದೇಶ: ನಾಲೆಗೆ ಟ್ರಾಕ್ಟರ್ ಪಲ್ಟಿ, ಮಕ್ಕಳು ಸೇರಿದಂತೆ 24 ಮಂದಿ ದುರ್ಮರಣ

Nagaraja AB

ಲಖನೌ: ನಾಲೆಗೆ ಟ್ರಾಕ್ಟರ್ ಟ್ರಾಲಿ ಪಲ್ಟಿಯಾದ ಪರಿಣಾಮ ಮಕ್ಕಳು, ಮಹಿಳೆಯರು ಸೇರಿದಂತೆ 24 ಮಂದಿ ದುರ್ಮರಣ ಹೊಂದಿರುವ ಘಟನೆ ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

ಮಾಘ ಪೂರ್ಣಿಮೆ ಅಂಗವಾಗಿ ಗಂಗಾ ನದಿಯಲ್ಲಿ ಪವಿತ್ರ ಸ್ನಾನಕ್ಕಾಗಿ ಜೈಥಾರಾ ಮತ್ತಿತರ ಎರಡ್ಮೂರು ಗ್ರಾಮಗಳಿಂದ ಸುಮಾರು 50 ಕ್ಕೂ ಹೆಚ್ಚು ಜನರು ಟ್ರಾಕ್ಟರ್ ಟ್ರಾಲಿಯಲ್ಲಿ ಹೊರಟ್ಟಿದಾಗ ಈ ಭೀಕರ ದುರಂತ ಸಂಭವಿಸಿದೆ. ನಾಲೆಗೆ ಬಿದ್ದ ಅನೇಕರನ್ನು ರಕ್ಷಿಸಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ ಎಂದು ಪೊಲೀಸರು ಹೇಳಿದ್ದಾರೆ.

ಕಾಸ್ಗಂಜ್ ಜಿಲ್ಲೆಯ ಗಾದಾಯಿ ಬಳಿಯ ರಿಯಾಜ್ ಗಂಜ್-ಪಾಟಿಯಾಲಿ ಲಿಂಕ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಹೆಚ್ಚಿನ ಪ್ರಯಾಣಿಕರಿದ್ದ ತುಂಬಿದ ಟ್ರಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಸಂಜೆಯವರೆಗೂ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರಿದಿತ್ತು ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

ಚಾಲಕ ಮತ್ತೊಂದು ವಾಹನವನ್ನು ಹಿಂದಿಕ್ಕಿಲು ಪ್ರಯತ್ನಿಸಿದಾಗ ಟ್ರಾಕ್ಟರ್ ಪಲ್ಟಿಯಾಗಿದ್ದು, 7-8 ಆಳದ ನಾಲೆಗೆ ಬಿದ್ದಿದೆ. ಮೃತರಲ್ಲಿ ಏಳು ಮಕ್ಕಳು, ಎಂಟು ಮಹಿಳೆಯರು ಸೇರಿದ್ದಾರೆ ಎಂದು ಅಲಿಘಡ ವಲಯದ ಇನ್ಸ್ ಪೆಕ್ಟರ್ ಜನರಲ್ ಶಲಭ್ ಮಾಥುರ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅಪಘಾತದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ ರೂ. 2 ಲಕ್ಷ ಹಾಗೂ ಗಾಯಾಳುಗಳಿಗೆ ರೂ. 50,000 ಪರಿಹಾರ ಘೋಷಿಸಿದ್ದಾರೆ.

SCROLL FOR NEXT