ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ 
ದೇಶ

ದೆಹಲಿ ಮೆಟ್ರೋ ಹಳದಿ ಮಾರ್ಗದ ನಿಲ್ದಾಣದಲ್ಲಿ ರೈಲಿನ ಮುಂದೆ ಜಿಗಿದು ವ್ಯಕ್ತಿ ಆತ್ಮಹತ್ಯೆ

Lingaraj Badiger

ನವದೆಹಲಿ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ 39 ವರ್ಷದ ವ್ಯಕ್ತಿಯೊಬ್ಬರು ಬುಧವಾರ ದೆಹಲಿ ಮೆಟ್ರೋದ ಹಳದಿ ಲೈನ್‌ನ ಉದ್ಯೋಗ್ ಭವನ ಮೆಟ್ರೋ ನಿಲ್ದಾಣದಲ್ಲಿ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉದ್ಯೋಗ್ ಭವನ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ನಂತರ ಕಾರಿಡಾರ್‌ನಲ್ಲಿ ಸುಮಾರು 35 ನಿಮಿಷಗಳ ಕಾಲ ರೈಲು ಸೇವೆ ಸ್ಥಗಿತಗೊಳಿಸಲಾಗಿತ್ತು ಎಂದು ಡಿಎಂಆರ್‌ಸಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ, ತಾನು ತೀವ್ರ "ಅನಾರೋಗ್ಯ" ದಿಂದ ಬಳಲುತ್ತಿದ್ದ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಆತನ ಬಳಿ "ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ".

ಘಟನೆಯ ಕುರಿತು ರಾಜೀವ್ ಚೌಕ್ ಪೊಲೀಸ್ ಠಾಣೆಗೆ ಕರೆ ಬಂದಿದೆ. ತಕ್ಷಣ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದ ನಂತರ ನಿಲ್ದಾಣದ ಪ್ಲಾಟ್‌ಫಾರ್ಮ್ ನಂ. 2 ರಲ್ಲಿ 11:30 ರ ಸುಮಾರಿಗೆ ರೈಲಿನ ಮುಂದೆ ಹಾರಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯ ಮುಕುಂದಪುರ ಪ್ರದೇಶದ ನಿವಾಸಿಯಾಗಿರುವ ತನ್ನ ಪತಿ, ಮೊದಲು ಪೇಂಟರ್ ಆಗಿ ಕೆಲಸ ಮಾಡುತ್ತಿದ್ದು, "ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಇತ್ತೀಚಿಗೆ ಅನಾರೋಗ್ಯದ ಕಾರಣದಿಂದ ಕೆಲಸ ಮಾಡುತ್ತಿರಲಿಲ್ಲ" ಎಂದು ಅವರ ಪತ್ನಿ ಪೊಲೀಸರಿಗೆ ತಿಳಿಸಿದ್ದಾರೆ.

ಮೃತದೇಹವನ್ನು ಆರ್‌ಎಂಎಲ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಸಿಆರ್‌ಪಿಸಿಯ ಸೆಕ್ಷನ್ 174 (ಅಸ್ವಾಭಾವಿಕ ಸಾವು) ಅಡಿಯಲ್ಲಿ ವಿಚಾರಣೆ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಪೊಲೀಸರು ಹೇಳಿದ್ದಾರೆ.

SCROLL FOR NEXT