ದೇಶ

ಸರ್ಕಾರಿ ಬಂಗಲೆ ತೆರವು ಆದೇಶ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಮಹುವಾ

Lingaraj Badiger

ನವದೆಹಲಿ: ಲೋಕಸಭೆಯಿಂದ ಉಚ್ಛಾಟಿತರಾಗಿರುವ ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ಅವರು ಸರ್ಕಾರಿ ಬಂಗಲೆ ತೆರವು ಆದೇಶದ ವಿರುದ್ಧ ದೆಹಲಿ ಹೈಕೋರ್ಟ್‌ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ಹಿಂಪಡೆದಿದ್ದಾರೆ.

ಸಂಸದೆ ಸ್ಥಾನದಿಂದ ಉಚ್ಛಾಟನೆಗೊಂಡ ಬೆನ್ನಲ್ಲೇ ಜನವರಿ 7, 2024 ರೊಳಗೆ ಸರ್ಕಾರಿ ನಿವಾಸ ಖಾಲಿ ಮಾಡುವಂತೆ ಕೇಂದ್ರ ಸರ್ಕಾರ ಮಹುವಾ ಮೊಯಿತ್ರಾ ಅವರಿಗೆ ನೋಟಿಸ್ ನೀಡಿತ್ತು. ಇದನ್ನು ಪ್ರಶ್ನಿಸಿ ಟಿಎಂಸಿ ನಾಯಕಿ ಹೈಕೋರ್ಟ್‌ ಮೊರೆ ಹೋಗಿದ್ದರು.

ಇಂದು ತಮ್ಮ ಅರ್ಜಿ ಹಿಂಪಡೆದ ಮೊಯಿತ್ರಾ ಪರ ವಕೀಲ ಪಿನಾಕಿ ಮಿಶ್ರಾ ಅವರು, ಮುಂಬರುವ ಲೋಕಸಭೆ ಚುನಾವಣೆಯವರೆಗೆ ಟಿಎಂಸಿ ನಾಯಕಿಗೆ ಬಂಗಲೆಯಲ್ಲಿ ಉಳಿಯಲು ಅನುಮತಿ ಕೋರಿ ಕೇಂದ್ರ ಸರ್ಕಾರದ ಎಸ್ಟೇಟ್ ನಿರ್ದೇಶನಾಲಯಕ್ಕೆ ಮನವಿ ಮಾಡುವುದಾಗಿ ನ್ಯಾಯಮೂರ್ತಿ ಸುಬ್ರಮಣ್ಯ ಪ್ರಸಾದ್ ಅವರಿಗೆ ತಿಳಿಸಿದ್ದಾರೆ.

ಬಳಿಕ ಅರ್ಜಿ ಹಿಂತೆಗೆದುಕೊಳ್ಳಲು ಅನುಮತಿ ನೀಡಿದ ಹೈಕೋರ್ಟ್, ಕಾನೂನು ಪ್ರಕಾರ ಸರ್ಕಾರ ಈ ವಿಷಯದ ಬಗ್ಗೆ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದೆ.

ಲೋಕಸಭೆಯಲ್ಲಿ ಪ್ರಶ್ನೆ ಕೇಳುವುದಕ್ಕೆ ಲಂಚ ಪಡೆದ ಆರೋಪದ ಮೇಲೆ ಮಹುವಾ ಮೊಯಿತ್ರಾ ಅವರನ್ನು ಸಂಸದ ಸ್ಥಾನದಿಂದ ಉಚ್ಚಾಟಿಸಲಾಗಿದೆ.

SCROLL FOR NEXT