ದೇಶ

ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಪವನ್ ಖೇರ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಲು 'ಸುಪ್ರೀಂ' ನಕಾರ

Ramyashree GN

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ಪವನ್ ಖೇರಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠವು, ಹೈಕೋರ್ಟ್ ನೀಡಿರುವ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಾವು ಒಲವು ಹೊಂದಿಲ್ಲ ಎಂದು ಹೇಳಿದೆ.

'ಕ್ಷಮಿಸಿ, ನಾವು ಈ ಬಗ್ಗೆ ಯಾವುದೇ ಒಲವು ಹೊಂದಿಲ್ಲ' ಎಂದು ಪೀಠ ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ತಂದೆಯ ಹೆಸರನ್ನು ತಪ್ಪಾಗಿ ಹೇಳಿ ಅವಹೇಳನ ಮಾಡಿದ್ದಾರೆ ಎಂಬ ಆರೋಪ ಪವನ್ ಖೇರಾ ಅವರ ಮೇಲಿದೆ.

ಕಳೆದ ವರ್ಷ ಆಗಸ್ಟ್ 17 ರಂದು ಅಲಹಾಬಾದ್ ಹೈಕೋರ್ಟ್ ಖೇರಾ ಅವರ ಮನವಿಯನ್ನು ವಜಾಗೊಳಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಯು ಈಗಾಗಲೇ ಸಾಕ್ಷ್ಯಾಧಾರ ಸಂಗ್ರಹಿಸಿದ್ದಾರೆ. ಇದರ ಆಧಾರದ ಮೇಲೆ ಖೇರಾ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಅರ್ಜಿಯನ್ನು ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 482ರ ಅಡಿ ವಜಾಗೊಳಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿತ್ತು. 

ಕಳೆದ ವರ್ಷ ಮಾರ್ಚ್ 20 ರಂದು, ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಅಸ್ಸಾಂ ಮತ್ತು ಉತ್ತರ ಪ್ರದೇಶದಲ್ಲಿ ಖೇರಾ ವಿರುದ್ಧ ದಾಖಲಾಗಿದ್ದ ಮೂರು ಎಫ್‌ಐಆರ್‌ಗಳನ್ನು ಒಟ್ಟಿಗೆ ಸೇರಿಸಿ ತನಿಖೆ ನಡೆಸುವಂತೆ ಲಖನೌದ ಹಜರತ್‌ಗಂಜ್ ಠಾಣೆಯ ಪೊಲೀಸರಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. 

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರುವರಿ 23ರಂದು ಪವನ್ ಖೇರ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಅದೇ ದಿನ ಲಖನೌ ನ್ಯಾಯಾಲಯ ಖೇರ ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು. 

ಆಪಾದಿತ ಹೇಳಿಕೆಗಳಿಗಾಗಿ ಖೇರಾ ನ್ಯಾಯಾಲಯದಲ್ಲಿ ಬೇಷರತ್ ಕ್ಷಮೆಯಾಚಿಸಿದ್ದಾರೆ.

SCROLL FOR NEXT