ದೇಶ

ದೆಹಲಿ ಮೊಹಲ್ಲಾ ಕ್ಲಿನಿಕ್‌ಗಳಲ್ಲಿ ಅಕ್ರಮ: ಸಿಬಿಐ ತನಿಖೆಗೆ ಕೇಂದ್ರ ಸರ್ಕಾರ ಆದೇಶ

Manjula VN

ನವದೆಹಲಿ: ದೆಹಲಿಯ ಆಡಳಿತಾರೂಢ (ಆಮ್ ಆದ್ಮಿ ಪಕ್ಷ) ಆಪ್ ಸರ್ಕಾರದ ಮೊಹಲ್ಲಾ ಕ್ಲಿನಿಕ್‌ಗಳಲ್ಲಿ ಕಳಪೆ ಔಷಧಿಗಳ ವಿತರಣೆ, ನಕಲಿ ರೋಗಶಾಸ್ತ್ರ ಮತ್ತು ರೇಡಿಯಾಲಜಿ ಪರೀಕ್ಷೆಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಪ್ರಕರಣವನ್ನು ಕೇಂದ್ರ ಗೃಹ ಸಚಿವಾಲಯ ಸಿಬಿಐಗೆ ತನಿಖೆಗೆ ಆದೇಶಿಸಿದೆ.

ಅಕ್ರಮದ ವರದಿ ಹಿನ್ನೆಲೆ ಸಿಬಿಐ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಗುರುವಾರ ಶಿಫಾರಸು ಮಾಡಿದ್ದರು. ಈ ಶಿಫಾರಸು ಆಧರಿಸಿ ಕೇಂದ್ರ ಗೃಹ ಸಚಿವಾಲಯ ಸಿಬಿಐಗೆ ಆದೇಶಿಸಿದೆ.

ಲೆಫ್ಟಿನೆಂಟ್ ಗವರ್ನರ್ ಕಚೇರಿಯ ಮೂಲಗಳ ಪ್ರಕಾರ, ವೈದ್ಯರ ಅನುಪಸ್ಥಿತಿಯಲ್ಲಿ ಅನಧಿಕೃತ / ವೈದ್ಯಕೀಯೇತರ ಸಿಬ್ಬಂದಿ ರೋಗಿಗಳಿಗೆ ಪರೀಕ್ಷೆಗಳು ಮತ್ತು ಔಷಧಿಗಳನ್ನು ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ.

ಲೆಫ್ಟಿನೆಂಟ್ ಗವರ್ನರ್‌ಗೆ ಸಲ್ಲಿಸಿದ ಆರೋಗ್ಯ ಇಲಾಖೆ ವರದಿಯಲ್ಲಿ ರೋಗಿಗಳ ನೋಂದಣಿ ಮತ್ತು ಅವರ ಮೇಲೆ ನಡೆಸಲಾದ ಪ್ರಯೋಗಾಲಯ ಪರೀಕ್ಷೆಗಳಿಗೆ ನಕಲಿ ಮೊಬೈಲ್ ಸಂಖ್ಯೆಗಳನ್ನು ಬಳಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಮೊಹಲ್ಲಾ ಕ್ಲಿನಿಕ್‌ಗಳಲ್ಲಿ ಗಂಭೀರ ಮೋಸ ಪತ್ತೆಯಾದ ಬಳಿಕ ಲೆಫ್ಟಿನೆಂಟ್ ಗವರ್ನರ್ ಸಿಬಿಐ ತನಿಖೆಗೆ ಆದೇಶಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ದೆಹಲಿ ಬಿಜೆಪಿ ನಾಯಕ ಹರೀಶ್ ಖುರಾನಾ, ನಕಲಿ ಔಷಧ ಹಗರಣದ ನಂತರ, ಮೊಹಲ್ಲಾ ಕ್ಲಿನಿಕ್‌ಗಳಲ್ಲಿ ನಕಲಿ ಲ್ಯಾಬ್ ಪರೀಕ್ಷೆಯ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. ದೆಹಲಿ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಎಎಪಿ ನಾಯಕರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಇದು ಅತ್ಯಂತ ಖಂಡನೀಯ. ಎಎಪಿ ನಾಯಕರು ದೆಹಲಿಯ ಬಡ ನಿವಾಸಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದ್ದಾರೆ.
     
ಮುಂದುವರಿದು ದೆಹಲಿಯ ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಅವರನ್ನು ವಜಾಗೊಳಿಸುವಂತೆ ನಾನು ಒತ್ತಾಯಿಸುತ್ತೇನೆ ಎಂದು ಹೇಳಿದರು.

SCROLL FOR NEXT