ದೇಶ

ಕತಾರ್ ವಿವಿಯಲ್ಲಿ ಉದ್ಯೋಗ ಆಮಿಷ; 2 ಲಕ್ಷ ರೂ. ಹಣ ಕಳೆದುಕೊಂಡ ವ್ಯಕ್ತಿ

Srinivasamurthy VN

ಮುಂಬೈ: ಕತಾರ್ ವಿಶ್ವ ವಿದ್ಯಾಲಯದಲ್ಲಿ ಪ್ರಾಧ್ಯಾಪಕ ಹುದ್ದೆ ನೀಡುವ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಂದ ಸುಮಾರು 2 ಲಕ್ಷ ರೂಪಾಯಿಗೂ ಅಧಿಕ ಹಣ ವಂಚಿಸಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ವರದಿಯಾಗಿದೆ.

ಮಹಾರಾಷ್ಟ್ರದ ಥಾಣೆ ಜಿಲ್ಲೆಯ 32 ವರ್ಷದ ವ್ಯಕ್ತಿಯೊಬ್ಬರನ್ನು ಇಬ್ಬರು ಅಪರಿಚಿತ ವ್ಯಕ್ತಿಗಳು ಕತಾರ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕ ಹುದ್ದೆ ನೀಡುವ ಆಮಿಷವೊಡ್ಡಿ ಅವರಿಂದ ಸುಮಾರು 2 ಲಕ್ಷಕ್ಕೂ ಹೆಚ್ಚು ಹಣವನ್ನು ಪಡೆದು ವಂಚಿಸಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಈ ಸಂಬಂಧ ಅಂಬರನಾಥ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಅಂಬರ್‌ನಾಥ್‌ನ ಗೌತಮ್ ನಗರ ಪ್ರದೇಶದ ನಿವಾಸಿಯಾಗಿದ್ದು, ಇಬ್ಬರು ಅಪರಿಚಿತ ವ್ಯಕ್ತಿಗಳು ತಮ್ಮನ್ನು ಫೋನ್ ಮತ್ತು ಇಮೇಲ್‌ಗಳ ಮೂಲಕ ಸಂಪರ್ಕಿಸಿ ಕತಾರ್ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಹುದ್ದೆಯನ್ನು ನೀಡುವುದಾಗಿ ಹೇಳಿ ವಂಚಿಸಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ದೂರಿನಲ್ಲಿ "ನೋಂದಣಿ, ದಾಖಲೆ ಪರಿಶೀಲನೆ, ವೀಸಾ ಪ್ರಕ್ರಿಯೆ ಮತ್ತು ವೈದ್ಯಕೀಯ ಪರೀಕ್ಷೆಗೆ ಹಣ ಪಾವತಿಸುವಂತೆ ಆರೋಪಿಗಳು ಕೇಳಿದ್ದು, ಅವರನ್ನು ನಂಬಿದ ಸಂತ್ರಸ್ತ 2023ರ ಆಗಸ್ಟ್ ಮತ್ತು ಅಕ್ಟೋಬರ್ ನಡುವೆ ವಂಚಕರಿಗೆ 2,28,600 ರೂ.ಗಳನ್ನು ವರ್ಗಾವಣೆ ಮಾಡಿದ್ದಾರೆ" ಎಂದು ತಿಳಿಸಿದ್ದಾರೆ.

ಬಳಿಕ ಸುಮಾರು ದಿನಗಳಾದರೂ ಉದ್ಯೋಗದ ಬಗ್ಗೆ ಯಾವುದೇ ಮಾಹಿತಿ ಬಾರದ ಕಾರಣ ಸಂತ್ರಸ್ತ ವಂಚಕರಲ್ಲಿ ವಿಚಾರಿಸಿದಾಗ ಅವರು ತಪ್ಪಿಸಿಕೊಳ್ಳುವ ಉತ್ತರಗಳನ್ನು ನೀಡಿದರು. ಕೊನೆಗೆ ಅಂಬರ್ ನಾಥ್ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

SCROLL FOR NEXT