ಅಹಮದಾಬಾದ್: ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಕಾರಿಡಾರ್‌ಗಾಗಿ ಶೇ. 100 ರಷ್ಟು ಭೂಸ್ವಾಧೀನ ಕಾರ್ಯ ಪೂರ್ಣಗೊಂಡಿದೆ ಎಂದು ನ್ಯಾಷನಲ್ ಹೈ-ಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (NHSRCL) ಸೋಮವಾರ ತಿಳಿಸಿದೆ.
ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿರುವುದಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಯೋಜನೆಗೆ ಅಗತ್ಯವಿರುವ ಸಂಪೂರ್ಣ 1389.49 ಹೆಕ್ಟೇರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಮುಂಬೈ ಮತ್ತು ಅಹಮದಾಬಾದ್ ನಡುವೆ ಹೈಸ್ಪೀಡ್ ಬುಲೆಟ್ ರೈಲು ಮಾರ್ಗ ನಿರ್ಮಿಸಲಾಗುತ್ತಿದೆ.
ಯೋಜನೆಯ ಎಲ್ಲಾ ಸಿವಿಲ್ ಗುತ್ತಿಗೆಗಳನ್ನು ಗುಜರಾತ್ ಮತ್ತು ಮಹಾರಾಷ್ಟ್ರಕ್ಕೆ ನೀಡಲಾಗಿದ್ದು, 120.4 ಕಿಮೀ ಗರ್ಡರ್‌ಗಳನ್ನು ಆರಂಭಿಸಲಾಗಿದೆ ಮತ್ತು 271 ಕಿಮೀ ಪಿಯರ್ ಕಾಸ್ಟಿಂಗ್ ಪೂರ್ಣಗೊಂಡಿದೆ ಎಂದು ಎನ್‌ಎಚ್‌ಎಸ್‌ಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
"ಜಪಾನಿನ ಶಿಂಕನ್‌ಸೆನ್‌ನಲ್ಲಿ ಬಳಸಿದಂತೆ MAHSR ಕಾರಿಡಾರ್ ಟ್ರ್ಯಾಕ್ ಸಿಸ್ಟಮ್‌ಗಾಗಿ ಸೂರತ್ ಮತ್ತು ಆನಂದ್‌ನಲ್ಲಿ ಬಲವರ್ಧಿತ ಕಾಂಕ್ರೀಟ್(RC) ಟ್ರ್ಯಾಕ್ ಬೆಡ್ ಅನ್ನು ಹಾಕಲಾಗುತ್ತಿದೆ. ಇದೇ ಮೊದಲ ಬಾರಿಗೆ ಭಾರತದಲ್ಲಿ J- ಸ್ಲ್ಯಾಬ್ ಬ್ಯಾಲೆಸ್ಟ್‌ಲೆಸ್ ಟ್ರ್ಯಾಕ್ ಸಿಸ್ಟಮ್ ಅನ್ನು ಬಳಸಲಾಗುತ್ತಿದೆ" ಎಂದು ಪ್ರಕಟಣೆ ತಿಳಿಸಿದೆ.
ಗುಜರಾತ್‌ನ ವಲ್ಸಾದ್ ಜಿಲ್ಲೆಯ ಜರೋಲಿ ಗ್ರಾಮದ ಬಳಿ 350 ಮೀಟರ್ ಉದ್ದ ಮತ್ತು 12.6 ಮೀಟರ್ ವ್ಯಾಸದ ಮೊದಲ ಪರ್ವತ ಸುರಂಗವನ್ನು ಕೇವಲ 10 ತಿಂಗಳಲ್ಲಿ ಪೂರ್ಣಗೊಳಿಸುವುದರೊಂದಿಗೆ ಗಮನಾರ್ಹ ಮೈಲಿಗಲ್ಲು ಸಾಧಿಸಿದೆ ಎಂದು NHSRCL ಹೇಳಿದೆ.