ಹಜಾರಿಬಾಗ್: ಜಾರ್ಖಂಡ್ನ ಹಜಾರಿಬಾಗ್ ಜಿಲ್ಲೆಯಲ್ಲಿ ಕಳೆದ ವಾರ ನಾಪತ್ತೆಯಾಗಿದ್ದ 11ನೇ ತರಗತಿ ವಿದ್ಯಾರ್ಥಿಯೊಬ್ಬ ಶುಕ್ರವಾರ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಸಿದ್ಧ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿದ್ದ ಬಾಲಕನನ್ನು ಜಗಳದ ಹಿನ್ನೆಲೆಯಲ್ಲಿ ಆತನ ಕ್ಲಾಸ್ ಮೇಟ್ ಗಳು ಕೊಂದು ಶವವನ್ನು ಇಚಕ್ ಪ್ರದೇಶದ ಬಾವಿಗೆ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ.
ತಮ್ಮ ನಡುವಿನ ಜಗಳ ಬಗೆಹರಿಸಿಕೊಳ್ಳಲು ಜನವರಿ 6 ರಂದು ತನ್ನ ಕ್ಲಾಸ್ ಮೇಟ್ ಗಳೊಂದಿಗೆ ಹೊರಗೆ ಹೋಗಿದ್ದ ವಿದ್ಯಾರ್ಥಿ ಮನೆಗೆ ವಾಪಸ್ಸಾಗಿರಲಿಲ್ಲ ಎಂದು ಕೊರ್ರಾ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ನಿಶಿ ಕುಮಾರಿ ತಿಳಿಸಿದ್ದಾರೆ.
ಆತನ ಪೋಷಕರು ಮಗ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಆರಂಭಿಸಲಾಗಿತ್ತು. ಆರು ದಿನಗಳ ನಂತರ ಇಂದು ಶವ ಬಾವಿಯಲ್ಲಿ ಪತ್ತೆಯಾಗಿದ್ದು, ಆತನ ಪೋಷಕರು ಅದನ್ನು ಗುರುತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕತ್ತು ಹಿಸುಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಅವರು ಹೇಳಿದ್ದಾರೆ.
ತನಿಖೆಯ ದಾರಿ ತಪ್ಪಿಸುವ ಸಲುವಾಗಿ ಶವವನ್ನು ಬಾವಿಗೆ ಎಸೆಯಲಾಗಿದೆ. ಕೊಲೆಗೆ ಸಂಬಂಧಿಸಿದಂತೆ ಆತನ ಇಬ್ಬರು ಕ್ಲಾಸ್ ಮೇಟ್ ಗಳನ್ನು ಬಂಧಿಸಲಾಗಿದೆ. ಇತರ ವಿದ್ಯಾರ್ಥಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.