ದೇಶ

ಅಯೋಧ್ಯೆ ರಾಮಮಂದಿರದಲ್ಲಿ ಭಾರೀ ನೂಕುನುಗ್ಗಲು; ಲಕ್ಷಾಂತರ ಭಕ್ತರಿಂದ ದರ್ಶನ; ಸಿಎಂ ಯೋಗಿ ವೈಮಾನಿಕ ಸಮೀಕ್ಷೆ

Vishwanath S

ಅಯೋಧ್ಯೆ: ಜನವರಿ 22ರಂದು ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ನಂತರ ಇಂದು ರಾಮ ಭಕ್ತರಿಗಾಗಿ ದೇವಾಲಯವನ್ನು ತೆರೆಯಲಾಗಿದ್ದು ರಾಮಲಲ್ಲಾನ ದರ್ಶನ ಪಡೆಯಲು ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು ಮೊದಲ ದಿನವೇ 2 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಮಲಲ್ಲಾನ ದರ್ಶನ ಪಡೆಯಲು ರಾಮ ಮಂದಿರಕ್ಕೆ ಅಪಾರ ಸಂಖ್ಯೆಯಲ್ಲಿ ರಾಮಭಕ್ತರು ಆಗಮಿಸುತ್ತಿದ್ದಾರೆ. ರಾಮಮಂದಿರದಲ್ಲಿ ರಾಮಭಕ್ತರ ದಂಡೇ ನೆರೆದಿದೆ. ಈ ವೇಳೆ ನೂಕುನುಗ್ಗಲು ಉಂಟಾಗಿ ಭಕ್ತರೊಬ್ಬರು ಗಾಯಗೊಂಡಿದ್ದಾರೆ. ಈ ವಿಚಾರಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸ್ವತಃ ಸಿಎಂ ಯೋಗಿ ಅಯೋಧ್ಯೆ ತಲುಪಿದ್ದಾರೆ. ಇದರೊಂದಿಗೆ ಅವರು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರ ಸಂಕೀರ್ಣದ ವೈಮಾನಿಕ ಸಮೀಕ್ಷೆ ನಡೆಸಿದರು.

ಇಂದು ಜನವರಿ 23ರಂದು ಮಧ್ಯಾಹ್ನದವರೆಗೆ ಎರಡೂವರೆ ರಿಂದ ಮೂರು ಲಕ್ಷ ಭಕ್ತರು ಭೇಟಿ ನೀಡಿದ್ದಾರೆ. ದಿನದ ಅಂತ್ಯದ ವೇಳೆಗೆ ಸುಮಾರು ಐದು ಲಕ್ಷ ಭಕ್ತರು ಭೇಟಿ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಅಪಾರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಲು ಅಯೋಧ್ಯೆಯಲ್ಲಿ ಉಳಿದಿದ್ದಾರೆ. ಎಲ್ಲಾ ವ್ಯವಸ್ಥೆಗಳು ನಿಯಂತ್ರಣದಲ್ಲಿವೆ. ಎಂಟು ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಪ್ರಾಣ ಪ್ರತಿಷ್ಠೆಯ ಮರುದಿನ, ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮಮಂದಿರದಲ್ಲಿ ರಾಮಲಲ್ಲಾನ ದರ್ಶನಕ್ಕಾಗಿ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದಾರೆ. ರಾಮಲಲ್ಲಾನ ದರ್ಶನ ಪಡೆಯಲು ಬೆಳಗಿನ ಜಾವ 3 ಗಂಟೆಯಿಂದಲೇ ಭಕ್ತರು ದೇವಸ್ಥಾನದಲ್ಲಿ ಸಾಲುಗಟ್ಟಿ ನಿಂತಿದ್ದರು. ನೂಕುನುಗ್ಗಲು ಕಂಡ ದೇವಸ್ಥಾನದ ಟ್ರಸ್ಟ್ ಸದಸ್ಯರು ಅಭೂತಪೂರ್ವ ಜನಸಂದಣಿಯನ್ನು ನಿಯಂತ್ರಿಸಲು ಸೂಕ್ತ ಭದ್ರತೆ ಒದಗಿಸಿ ವ್ಯವಸ್ಥೆ ಮುಂದುವರಿಸುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದರು.

SCROLL FOR NEXT