ದೇಶ

ಆಂಧ್ರ: ಟಿಕೆಟ್‌ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದ ಕಾಂಗ್ರೆಸ್; ಲೋಕಸಭೆಗೆ 25 ಸಾವಿರ, ವಿಧಾನಸಭೆಗೆ 10 ಸಾವಿರ ರೂ. ಶುಲ್ಕ

Lingaraj Badiger

ವಿಜಯವಾಡ: ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣಾ ಪ್ರಕ್ರಿಯೆಗೆ ಚಾಲನೆ ನೀಡಿರುವ ಆಂಧ್ರ ಪ್ರದೇಶ ಕಾಂಗ್ರೆಸ್ ಘಟಕ, ಬುಧವಾರ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿಗಳನ್ನು ಸ್ವೀಕರಿಸಲು ಆರಂಭಿಸಿದೆ.

ಕರ್ನಾಟಕ ಮತ್ತು ತೆಲಂಗಾಣ ಕಾಂಗ್ರೆಸ್ ಮಾದರಿಯಲ್ಲಿ ಆಂಧ್ರ ಪ್ರದೇಶ ಘಟಕ, ಲೋಕಸಭೆ ಚುನಾವಣೆ ಟಿಕೆಟ್ ಗೆ ಮೀಸಲು ವರ್ಗದ ಆಕಾಂಕ್ಷಿಗಳಿಗೆ 15,000 ರೂ. ಮತ್ತು ಉಳಿದ ಆಕಾಂಕ್ಷಿಗಳೆ 25,000 ರೂ. ಶುಲ್ಕ ವಿಧಿಸುತ್ತಿದೆ. ಇನ್ನು ವಿಧಾನಸಭೆ ಚುನಾವಣೆ ಟಿಕೆಟ್ ಗೆ ಸಾಮಾನ್ಯ ವರ್ಗದವರಿಗೆ 10,000 ರೂ. ಹಾಗೂ ಮೀಸಲು  ವರ್ಗದ ಆಕಾಂಕ್ಷಿಗಳಿಗೆ 5,000 ರೂ. ಶುಲ್ಕ ನಿಗದಿಪಡಿಸಿದೆ ಎಂದು ಆಂಧ್ರ ಪ್ರದೇಶ ಎಐಸಿಸಿ ಉಸ್ತುವಾರಿ ಮಾಣಿಕಂ ಟ್ಯಾಗೋರ್ ಅವರು ಹೇಳಿದ್ದಾರೆ.

ಮುಂದಿನ ಎರಡು ವಾರಗಳ ಕಾಲ ಆಕಾಂಕ್ಷಿಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಎಲ್ಲಾ ಅರ್ಜಿಗಳನ್ನು ಪ್ರದೇಶ ಚುನಾವಣಾ ಸಮಿತಿಯ ಮೂಲಕ ಪ್ರಕ್ರಿಯೆಗೊಳಿಸಲಾಗುವುದು ಮತ್ತು ನಂತರ ಅವುಗಳನ್ನು ಎಐಸಿಸಿಯ ಸ್ಕ್ರೀನಿಂಗ್ ಸಮಿತಿಗೆ ಕಳುಹಿಸಲಾಗುವುದು ಎಂದು ಟ್ಯಾಗೋರ್ ಹೇಳಿದ್ದಾರೆ.

ನಂತರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಿದೆ.

"ಇದು (ಕಾಂಗ್ರೆಸ್) ಪ್ರಜಾಸತ್ತಾತ್ಮಕ ಪಕ್ಷವಾಗಿದೆ. ಆದ್ದರಿಂದ ಯಾವುದೇ ಕಾಂಗ್ರೆಸ್ ಕಾರ್ಯಕರ್ತರು ಬಂದು ಅರ್ಜಿ ಸಲ್ಲಿಸಬಹುದು" ಎಂದು ಟ್ಯಾಗೋರ್ ಹೇಳಿದ್ದಾರೆ.

SCROLL FOR NEXT