ದೇಶ

ನಾಗಾಲ್ಯಾಂಡ್ ಕಲ್ಲಿದ್ದಲು ಗಣಿಯಲ್ಲಿ ಭಾರಿ ಅಗ್ನಿ ಅವಘಡ; ಆರು ಕಾರ್ಮಿಕರು ಸಜೀವ ದಹನ

Lingaraj Badiger

ಗುವಾಹಟಿ: ನಾಗಾಲ್ಯಾಂಡ್‌ನ ವೋಖಾ ಜಿಲ್ಲೆಯ ರುಚಯಾನ್ ಗ್ರಾಮದಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಗುರುವಾರ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಆರು ಕಾರ್ಮಿಕರು ಸಜೀವ ದಹನವಾಗಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ. 

ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಯ ಕುರಿತು ಜಿಲ್ಲಾ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.

ಮೃತರು ಹಾಗೂ ಗಾಯಾಳು ಕಾರ್ಮಿಕರು ಅಸ್ಸಾಂ ಮೂಲದವರು. ಗಾಯಾಳುಗಳು ನಾಗಾಲ್ಯಾಂಡ್‌ನ ವಾಣಿಜ್ಯ ಕೇಂದ್ರವಾದ ದಿಮಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಸೋರಿಕೆಯಿಂದಾಗಿ ಜನರೇಟರ್ ಸ್ಫೋಟಗೊಂಡಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಗಣಿಯಿಂದ ಬಿಡುಗಡೆಯಾದ ಅನಿಲ ಅವಘಡಕ್ಕೆ ಕಾರಣ ಎಂದು  ಕೆಲವು ಸ್ಥಳೀಯರು ಹೇಳಿದ್ದಾರೆ.

ಘಟನೆಯ ಸಮಯದಲ್ಲಿ ಗಣಿಯಲ್ಲಿ ಅಗ್ನಿಶಾಮಕ ಸೇರಿದಂತೆ ಯಾವುದೇ ಸುರಕ್ಷತಾ ಕ್ರಮಗಳು ಲಭ್ಯವಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಆರು ಕಾರ್ಮಿಕರ ಕುಟುಂಬಗಳಿಗೆ ತಲಾ 1 ಲಕ್ಷ ರೂಪಾಯಿ ಪರಿಹಾರ ನೀಡಲು ಗಣಿ ಮಾಲೀಕರು ನಿರ್ಧರಿಸಿದ್ದಾರೆ.

SCROLL FOR NEXT