ದೇಶ

ಬಿಹಾರ ರಾಜಕೀಯ ಸಂಘರ್ಷ: ಫೆಬ್ರವರಿ 10ರಂದು ನಿತೀಶ್ ಕುಮಾರ್ ವಿಶ್ವಾಸಮತ ಯಾಚನೆ!

Srinivasamurthy VN

ಪಾಟ್ನಾ: ಮಹಾ ಘಟ್ ಬಂಧನ್ ಮೈತ್ರಿಕೂಟ ತೊರೆದು ಎನ್ ಡಿಎ ತೆಕ್ಕೆಗೆ ಜಾರಿ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ್ದ ಬಿಹಾರ ಸಿಎಂ ನಿತೀಶ್ ಕುಮಾರ್ ಫೆಬ್ರವರಿ 10ರಂದು ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.

ಮಂಗಳವಾರ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಬಿಹಾರದ ಹೊಸ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿ ಸರ್ಕಾರವು ಫೆಬ್ರವರಿ 10 ರಂದು ವಿಧಾನಸಭೆಯಲ್ಲಿ ವಿಶ್ವಾಸ ಮತವನ್ನು ಕೇಳಲಿದೆ.

ವಿಧಾನಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ಬಿಹಾರ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಸಾಂಪ್ರದಾಯಿಕ ಭಾಷಣ ಮಾಡಿದ ನಂತರ ಬಜೆಟ್ ಅಧಿವೇಶನದ ಮೊದಲ ದಿನದಂದು ಸರ್ಕಾರ ವಿಶ್ವಾಸ ಮತವನ್ನು ಕೇಳಲಿದೆ. ಈ ವಿಶೇಷ ಅಧಿವೇಶನವು ಒಟ್ಟು 12 ಕೆಲಸದ ದಿನಗಳನ್ನು ಹೊಂದಿದ್ದು, ಫೆಬ್ರವರಿ 12 ರಂದು ರಾಜ್ಯ ಬಜೆಟ್ ಮಂಡಿಸಲಾಗುವುದು ಎಂದು ಸಂಸದೀಯ ವ್ಯವಹಾರಗಳ ಇಲಾಖೆ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಜನತಾ ದಳ-ಯುನೈಟೆಡ್‌ (ಜೆಡಿಯು)ನ ಅಧ್ಯಕ್ಷ ನಿತೀಶ್ ಕುಮಾರ್, ಬಿಹಾರದಲ್ಲಿ ನಡೆದ ನಾಟಕೀಯ ರಾಜಕೀಯ ಬೆಳವಣಿಗೆ ಬಳಿಕ ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಯೊಂದಿಗೆ ಹೊಸ ಸರ್ಕಾರವನ್ನು ರಚಿಸಿದ್ದರು. ಆ ಮೂಲಕ ದಾಖಲೆಯ ಒಂಬತ್ತನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅಲ್ಲದೆ 18 ತಿಂಗಳ ಹಿಂದಿನ ಮಹಾಘಟ್ ಬಂಧನ್ ಸರ್ಕಾರಕ್ಕೆ ಎಳ್ಳು ನೀರು ಬಿಟ್ಟಿದ್ದರು.

ಸ್ಪೀಕರ್ ಬದಲಾವಣೆಗೆ ಬಿಜೆಪಿ ಪಟ್ಟು
ಇನ್ನು ಈ ಹಿಂದೆ ಮಹಾಘಟ್ ಬಂಧನ್ ಸರ್ಕಾರ ರಚನೆಯಾದಾಗ ಆರ್ ಜೆಡಿ (ರಾಷ್ಟ್ರೀಯ ಜನತಾ ದಳ) ಶಾಸಕ ಅವಧ್ ಬಿಹಾರಿ ಚೌಧರಿ ಸ್ಪೀಕರ್ ಆಗಿ ನೇಮಕವಾಗಿದ್ದರು. ಆದರೆ ಇದೀಗ ಅವರ ವಿರುದ್ಧ ಬಿಜೆಪಿ ಮತ್ತು ಎನ್ ಡಿಎ ಮೈತ್ರಿಕೂಟದ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಒತ್ತಡದ ನಡುವೆಯೂ ಸ್ಪೀಕರ್ ಸ್ಥಾನದಿಂದ ಕೆಳಗಿಳಿಯದಿರುವ ಹಿನ್ನೆಲೆಯಲ್ಲಿ ಇದು ಬಿರುಸಿನ ಅಧಿವೇಶನವಾಗಲಿದೆ ಎಂದು ನಿರೀಕ್ಷಿಸಲಾಗಿದೆ. 

ಮೂಲಗಳ ಪ್ರಕಾರ ವಿಧಾನಸಭಾ ಸ್ಪೀಕರ್ ಹುದ್ದೆಯನ್ನು ಬಿಜೆಪಿಯೇ ಉಳಿಸಿಕೊಳ್ಳಲಿದೆ ಎಂದು ತಿಳಿದು ಬಂದಿದೆ.

SCROLL FOR NEXT