ದೇಶ

'ಮೇಕ್ ಇನ್ ಇಂಡಿಯಾ', 'ಆತ್ಮನಿರ್ಭರ್ ಭಾರತ್' ನಮ್ಮ ಶಕ್ತಿ, ರಾಮಮಂದಿರ ನಿರ್ಮಾಣ ಕನಸು ಇಂದು ನನಸು: ರಾಷ್ಟ್ರಪತಿ ದ್ರೌಪದಿ ಮುರ್ಮು

Sumana Upadhyaya

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ ಇಂದು ಬುಧವಾರ ಆರಂಭವಾಗಿದ್ದು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಬಜೆಟ್ ಅಧಿವೇಶನ ಆರಂಭದಲ್ಲಿ ಸಂಸತ್ತಿನ ಉಭಯ ಸದನಗಳನ್ನುದ್ದೇಶಿಸಿ ಭಾಷಣ ಮಾಡಿದರು.

ಅವರ ಭಾಷಣದ ಹೈಲೈಟ್ ಇಂತಿದೆ:

  1. ನಮ್ಮ ಸರ್ಕಾರ ಇಲ್ಲಿಯವರೆಗೆ ಅಭಿವೃದ್ಧಿಯಿಂದ ದೂರವಿದ್ದವರ ಬಗ್ಗೆ ಕಾಳಜಿ ವಹಿಸಿದೆ. ಕಳೆದ 10 ವರ್ಷಗಳಲ್ಲಿ, ಸಾವಿರಾರು ಬುಡಕಟ್ಟು ಹಳ್ಳಿಗಳಿಗೆ ಮೊದಲ ಬಾರಿಗೆ ವಿದ್ಯುತ್ ಮತ್ತು ರಸ್ತೆ ಸಂಪರ್ಕವನ್ನು ತಲುಪಿಸಿದೆ. ಲಕ್ಷಾಂತರ ಬುಡಕಟ್ಟು ಕುಟುಂಬಗಳು ಇದೀಗ ಪೈಪ್‌ಲೈನ್‌ಗಳ ಮೂಲಕ ಶುದ್ಧ ನೀರನ್ನು ಪಡೆಯಲು ಪ್ರಾರಂಭಿಸಿವೆ. ಕೇಂದ್ರ ಸರ್ಕಾರವು ಸಾವಿರಾರು ಬುಡಕಟ್ಟು ಪ್ರಾಬಲ್ಯದ ಹಳ್ಳಿಗಳಿಗೆ 4G ಇಂಟರ್ನೆಟ್ ಸಂಪರ್ಕವನ್ನು ಒದಗಿಸಿದೆ. ಬುಡಕಟ್ಟು ಕುಟುಂಬಗಳಲ್ಲಿ, ಹಲವಾರು ತಲೆಮಾರುಗಳು ಸಿಕಲ್ ಸೆಲ್ ಅನೀಮಿಯಾದಿಂದ ಬಳಲುತ್ತಿದ್ದಾರೆ. ಇದಕ್ಕಾಗಿ ಪ್ರಥಮ ಬಾರಿಗೆ ರಾಷ್ಟ್ರೀಯ ಮಿಷನ್ ಆರಂಭಿಸಲಾಗಿದೆ. ಇದುವರೆಗೆ ಸುಮಾರು 1.40 ಕೋಟಿ ಜನರು ಇದರ ಅಡಿಯಲ್ಲಿ ತಪಾಸಣೆಗೊಳಪಟ್ಟಿದ್ದಾರೆ.
  2. ಕಳೆದ ವರ್ಷಗಳಲ್ಲಿ, ಜಗತ್ತು ಎರಡು ಪ್ರಮುಖ ಯುದ್ಧಗಳಿಗೆ ಸಾಕ್ಷಿಯಾಗಿದೆ ಮತ್ತು ಕರೋನಾನಂತಹ ಸಾಂಕ್ರಾಮಿಕವನ್ನು ಎದುರಿಸಿತು. ಅಂತಹ ಜಾಗತಿಕ ಬಿಕ್ಕಟ್ಟುಗಳ ಹೊರತಾಗಿಯೂ, ಭಾರತ ಸರ್ಕಾರವು ದೇಶದಲ್ಲಿ ಹಣದುಬ್ಬರವನ್ನು ನಿಯಂತ್ರಣದಲ್ಲಿ ಇರಿಸಿದೆ ಮತ್ತು ಸಾಮಾನ್ಯ ಭಾರತೀಯರ ಹೊರೆ ಹೆಚ್ಚಾಗಲು ಬಿಡಲಿಲ್ಲ.
  3. ಅಭಿವೃದ್ಧಿ ಹೊಂದಿದ ಭಾರತದ ಭವ್ಯ ಸೌಧವು ಯುವ ಶಕ್ತಿ, ಮಹಿಳಾ ಶಕ್ತಿ, ರೈತರು ಮತ್ತು ಬಡವರು ಎಂಬ ನಾಲ್ಕು ಬಲವಾದ ಸ್ತಂಭಗಳ ಮೇಲೆ ನಿಂತಿದೆ ಎಂದು ನನ್ನ ಸರ್ಕಾರ ನಂಬುತ್ತದೆ
  4. ಕಳೆದ 10 ವರ್ಷಗಳಲ್ಲಿ, ದಶಕಗಳಿಂದ ದೇಶದ ಜನರು ಕಾಯುತ್ತಿದ್ದ ರಾಷ್ಟ್ರೀಯ ಹಿತಾಸಕ್ತಿಯ ಹಲವಾರು ಕಾರ್ಯಗಳನ್ನು ಭಾರತವು ಪೂರ್ಣಗೊಳಿಸಿದೆ. ರಾಮಮಂದಿರ ನಿರ್ಮಾಣಕ್ಕೆ ಶತಮಾನಗಳಿಂದಲೂ ಕಾಯಲಾಗಿತ್ತು. ಇಂದು ಅದು ಪೂರೈಸಿದೆ. ಜಮ್ಮು-ಕಾಶ್ಮೀರದಿಂದ ಆರ್ಟಿಕಲ್ 370 ರದ್ದತಿ ಈಗ ಇತಿಹಾಸವಾಗಿದೆ
  5. 'ಮೇಕ್ ಇನ್ ಇಂಡಿಯಾ' ಮತ್ತು 'ಆತ್ಮನಿರ್ಭರ್ ಭಾರತ್' ನಮ್ಮ ಶಕ್ತಿಯಾಗಿವೆ. ರಕ್ಷಣಾ ಕ್ಷೇತ್ರದಲ್ಲಿನ ಉತ್ಪಾದನೆಯು 1 ಲಕ್ಷ ಕೋಟಿ ರೂಪಾಯಿಗಳ ಗಡಿ ದಾಟಿದೆ.
  6. ಇಂದು ನಾವು ಕಾಣುತ್ತಿರುವ ಸಾಧನೆಗಳು ಕಳೆದ 10 ವರ್ಷಗಳ ಕ್ರಮಗಳ ವಿಸ್ತರಣೆಯಾಗಿದೆ. ನಾವು ಬಾಲ್ಯದಿಂದಲೂ 'ಗರೀಬಿ ಹಠಾವೋ' ಘೋಷಣೆಯನ್ನು ಕೇಳಿದ್ದೇವೆ, ಇಂದು, ನಮ್ಮ ಜೀವನದಲ್ಲಿ ಮೊದಲ ಬಾರಿಗೆ, ಬಡತನವನ್ನು ದೊಡ್ಡ ಪ್ರಮಾಣದಲ್ಲಿ ನಿವಾರಿಸುವುದನ್ನು ನೋಡುತ್ತಿದ್ದೇವೆ.
  7. ಕಳೆದ ವರ್ಷ ಭಾರತಕ್ಕೆ ಸಾಧನೆಗಳೇ ತುಂಬಿದ ವರ್ಷವಾಗಿದ್ದವು. ಅನೇಕ ಯಶಸ್ಸುಗಳನ್ನು ಕಂಡವು. ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಯಿತು. ಭಾರತವು ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ರಾಷ್ಟ್ರವಾಯಿತು. ಭಾರತವು ಆಯೋಜಿಸಿದ ಯಶಸ್ವಿ G20 ಶೃಂಗಸಭೆಯು ಭಾರತದ ಪಾತ್ರವನ್ನು ವಿಶ್ವದಲ್ಲಿ ಬಲಪಡಿಸಿತು. ಭಾರತವು ಏಷ್ಯನ್ ಗೇಮ್ಸ್‌ನಲ್ಲಿ 100 ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದೆ, ಅಟಲ್ ಸುರಂಗವನ್ನು ಪಡೆದುಕೊಂಡಿದೆ.
  8. ನಮ್ಮ ಗಡಿಯಲ್ಲಿ ಸರ್ಕಾರ ಆಧುನಿಕ ಮೂಲ ಸೌಕರ್ಯಗಳನ್ನು ನಿರ್ಮಿಸುತ್ತಿದೆ. ನಮ್ಮ ಪಡೆಗಳು ಭಯೋತ್ಪಾದನೆ ಮತ್ತು ವಿಸ್ತರಣಾವಾದಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತಿವೆ. ಆಂತರಿಕ ಶಾಂತಿಗಾಗಿ ಸರ್ಕಾರದ ಪ್ರಯತ್ನಗಳ ಅರ್ಥಪೂರ್ಣ ಫಲಿತಾಂಶಗಳು ನಮ್ಮ ಮುಂದಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆ ಮತ್ತು ಸುರಕ್ಷತೆಯ ವಾತಾವರಣವಿದೆ. ನಕ್ಸಲ್ ಹಿಂಸಾಚಾರದ ಘಟನೆಗಳಲ್ಲಿ ಭಾರಿ ಇಳಿಕೆ ಕಂಡುಬಂದಿದೆ.
  9. ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ಮುರ್ಮು ಅವರು ಸಂಸತ್ ಭವನಕ್ಕೆ ನೂತನ ಸಂಸತ್ತು ಭವನದ 'ಸೆಂಗೊಲ್' ನ್ನು ತಮ್ಮ ಮುಂದೆ ಹೊತ್ತುಕೊಂಡು ಸದನವನ್ನು ಪ್ರವೇಶಿಸಿದರು.
  10. ನೀತಿ ಆಯೋಗದ ಪ್ರಕಾರ, ಸರ್ಕಾರದ 10 ವರ್ಷಗಳ ಆಡಳಿತದಲ್ಲಿ ಸುಮಾರು 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ.
  11. ದೇಶದ ಹಣದುಬ್ಬರ  ದರ ಈ ಹಿಂದೆ ಎರಡಂಕಿಯಲ್ಲಿತ್ತು, ಅದು ಈಗ ಶೇಕಡಾ 4 ರೊಳಗೆ ಇದೆ. ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಎಂದು ರಾಷ್ಟ್ರಪತಿಗಳು ಹೇಳಿ ಭಾಷಣ ಮುಕ್ತಾಯಗೊಳಿಸಿದರು. ರಾಷ್ಟ್ರಪತಿಗಳ ಭಾಷಣ ವೇಳೆ ಮುಂದಿನ ಸಾಲಿನಲ್ಲಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ನಿತಿನ್ ಗಡ್ಕರಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಕುಳಿತಿದ್ದರು. 
SCROLL FOR NEXT