ನವದೆಹಲಿ: 2024ರ ಲೋಕಸಭೆ ಚುನಾವಣೆಯಲ್ಲಿ ಜನರು ಮೋದಿ ಸರ್ಕಾರದ ಅಹಂ ಮುರಿದಿದ್ದಾರೆ. ಅಲ್ಲದೇ, ಭಾರತದಲ್ಲಿ ಕೋಮು ರಾಜಕೀಯಕ್ಕೆ ಅಂತ್ಯ ಹಾಡಿದ್ದಾರೆ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಅಖಿಲೇಶ್ ಯಾದವ್ ಮಂಗಳವಾರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಅಖಿಲೇಶ್, ಚುನಾವಣಾ ಫಲಿತಾಂಶ ಇಂಡಿಯಾ ಬಣಕ್ಕೆ ನೈತಿಕ ಗೆಲುವು ಮತ್ತು ಜವಾಬ್ದಾರಿಯ ಸಂದೇಶವಾಗಿದೆ ಎಂದರು.
‘ಜನರು ಸರ್ಕಾರದ ಅಹಂ ಮುರಿದಿದ್ದಾರೆ. ಇದು ಸರ್ಕಾರವಲ್ಲ. ಈ ಬಾರಿ ಸೋತ ಸರ್ಕಾರದವಿದ್ದಂತೆ ಅನಿಸುತ್ತಿದೆ. ಸರ್ಕಾರ ಹೆಚ್ಚಿನ ದಿನ ಇರುವುದಿಲ್ಲ ಎಂದು ಜನರು ಹೇಳುತ್ತಿದ್ದಾರೆ. ಚುನಾವಣೆಯಲ್ಲಿ ಇಂಡಿಯಾ ಮೈತ್ರಿಗೆ ದೂರೆತ ನೈತಿಕ ಗೆಲುವು ದೊರಕಿದೆ. ಇದು ಸಕಾರಾತ್ಮಕ ರಾಜಕೀಯದ ವಿಜಯವಾಗಿದೆ ಎಂದು ಅವರು ಹೇಳಿದರು.
INDIA ಬಣ ದೇಶದ ಪರವಾಗಿದೆ ಎಂದು ಇಡೀ ಭಾರತ ಅರ್ಥಮಾಡಿಕೊಂಡಿದೆ. ಈ ಚುನಾವಣೆಯು ಇಂಡಿಯಾ ಬಣದ ನೈತಿಕ ಗೆಲುವು. ಪಿಡಿಎ, ಸಾಮಾಜಿಕ ನ್ಯಾಯ ಚಳುವಳಿಯ ಗೆಲುವು. 2024 ರ ಸಂದೇಶವು ಜವಾಬ್ದಾರಿಯಿಂದ ಕೂಡಿದೆ. ಜೂನ್ 4, 2024 ರಂದು ಭಾರತಕ್ಕೆ ಕೋಮು ರಾಜಕೀಯದಿಂದ ಮುಕ್ತಿ ಪಡೆದ ದಿನವಾಗಿದೆ. ಈ ಚುನಾವಣೆಯಲ್ಲಿ ಕೋಮುವಾದಿ ರಾಜಕೀಯವು ಶಾಶ್ವತವಾಗಿ ಸೋತಿದೆ. ಸಂವಿಧಾನದ ಪರ ಜನರು ಗೆದ್ದಿದ್ದಾರೆ. ಸಂವಿಧಾನ ಗೆದ್ದಿದೆ. ಅಯೋಧ್ಯೆಯ ಗೆಲುವು ಭಾರತದ ಪ್ರಬುದ್ಧ ಮತದಾರರ ಪ್ರಜಾಸತ್ತಾತ್ಮಕ ವಿಜಯವಾಗಿದೆ ಎಂದು ಅಖಿಲೇಶ್ ಯಾದವ್ ಹೇಳಿದರು.
ಇದೇ ವೇಳೆ, ಪೇಪರ್ ಸೋರಿಕೆ ವಿಚಾರವಾಗಿ ಮಾತನಾಡಿದ ಅಖಿಲೇಶ್, ಯುವಕರಿಗೆ ಉದ್ಯೋಗ ನೀಡುವುದನ್ನು ತಪ್ಪಿಸಲು ಉದ್ದೇಶಪೂರ್ವಕವಾಗಿ ಸೋರಿಕೆ ಮಾಡಲಾಗುತ್ತಿದೆ. "ಪೇಪರ್ ಸೋರಿಕೆ ಏಕೆ ನಡೆಯುತ್ತಿದೆ? ಸತ್ಯವೆಂದರೆ ಇದನ್ನು ಸರ್ಕಾರ ಮಾಡುತ್ತಿದೆ. ಆದ್ದರಿಂದ ಅದು ಯುವಕರಿಗೆ ಉದ್ಯೋಗ ನೀಡಬೇಕಾಗಿಲ್ಲ ಎಂದು ಅವರು ಹೇಳಿದರು.