ಸೂರ್ಯಪೇಟೆ: ಕಾನೂನುಬಾಹಿರ ಭ್ರೂಣ ಲಿಂಗ ಪತ್ತೆ ಪರೀಕ್ಷೆ, ಗರ್ಭಪಾತದ ನಂತರ ಗರ್ಭಿಣಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಗರ್ಭಪಾತಕ್ಕೆ ಒಳಗಾಗುವಂತೆ ಒತ್ತಾಯಿಸಿದ ಮಹಿಳೆಯ ಪತಿ ಮತ್ತು ವೈದ್ಯರೊಬ್ಬರು ಸೇರಿದ್ದಾರೆ.
ಸಂತ್ರಸ್ತೆ ಸುಹಾಸಿನಿ, 2019 ರಲ್ಲಿ ರತ್ನಾವತ್ ಹರಿಸಿಂಗ್ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರು ಇತ್ತೀಚೆಗೆ ಗರ್ಭಿಣಿಯಾದ ನಂತರ ಮತ್ತೆ ಹೆಣ್ಣು ಮಗುವಿಗೆ ಜನ್ಮ ನೀಡಿದರೆ ಆಕೆಯನ್ನು ಬಿಟ್ಟು ಬೇರೆಯವರನ್ನು ಮದುವೆಯಾಗುವುದಾಗಿ ರತ್ನಾವತ್ ಹೇಳಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸನ್‌ಪ್ರೀತ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂತ್ರಸ್ತೆಯನ್ನು ಕೊಡಾಡ್‌ನ ಗುರುವಯ್ಯ ಆಸ್ಪತ್ರೆಯಲ್ಲಿ ಭ್ರೂಣ ಲಿಂಗ ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆಕೆಗೆ ಹೆಣ್ಣು ಮಗುವಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಪ್ರಸವಪೂರ್ವ ಲಿಂಗ-ನಿರ್ಣಯ ಭಾರತದಲ್ಲಿ ಪೂರ್ವ ಪರಿಕಲ್ಪನೆ ಮತ್ತು ಪ್ರಸವಪೂರ್ವ ರೋಗನಿರ್ಣಯ ತಂತ್ರಗಳ (PC-PNDT) ಕಾಯ್ದೆ1994 ರ ಅಡಿಯಲ್ಲಿ ಕಾನೂನುಬಾಹಿರವಾಗಿದೆ. ನಂತರ ರತ್ನಾವತ್ ಆಕೆಯನ್ನು ಗರ್ಭಪಾತಕ್ಕಾಗಿ ಹುಜೂರ್‌ನಗರದ ನ್ಯೂ ಕಮಲಾ ಆಸ್ಪತ್ರೆಗೆ ಕರೆದೊಯ್ದಿದ್ದರು ಎಂದು ಎಸ್‌ಪಿ ತಿಳಿಸಿದ್ದಾರೆ.
ಮತ್ತೊಬ್ಬ ಆರೋಪಿ ಡಾ. ಶೇಖ್ ಖಾಸಿಂ ಗರ್ಭಪಾತಕ್ಕೆ ಪ್ರೇರೇಪಿಸಲು ಕೆಲವು ಮಾತ್ರೆಗಳನ್ನು ನೀಡಿದ್ದರು. ಆದರೆ ಸುಹಾಸಿನಿ ಅವರಿಗೆ ತೀವ್ರ ರಕ್ತಸ್ರಾವವಾಗಿದ್ದು, ಚಿಕಿತ್ಸೆಗಾಗಿ ಹೈದರಾಬಾದ್‌ಗೆ ಕರೆದೊಯ್ಯುವಾಗ ಸಾವನ್ನಪ್ಪಿದ್ದಾರೆ.
ರತ್ನಾವತ್, ಡಾ.ಖಾಸಿಂ ಮತ್ತು ಇತರ ನಾಲ್ವರ ವಿರುದ್ಧ PC-PNDTಕಾಯ್ದೆಯಡಿಯಲ್ಲಿ ಚಿವ್ವೆಮ್ಲಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ, ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.