ಹೈದರಾಬಾದ್: ಜುಲೈ 1ರಿಂದ ಜಾರಿಗೆ ಬಂದಿರುವ ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು ಬಡವರು, ದುರ್ಬಲ ವರ್ಗಗಳು, ಮುಸ್ಲಿಮರ, ಆದಿವಾಸಿಗಳು ಮತ್ತು ದಲಿತರ ವಿರುದ್ಧ ಬಳಸಲಾಗುತ್ತದೆ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್ ಓವೈಸಿ ಗುರುವಾರ ಆರೋಪಿಸಿದ್ದಾರೆ.
ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿದ ಓವೈಸಿ, ಮೂರು ಹೊಸ ಕ್ರಿಮಿನಲ್ ಕಾನೂನುಗಳು - ಭಾರತೀಯ ನ್ಯಾಯ ಸಂಹಿತೆ (BNS), ಭಾರತೀಯ ನಾಗರಿಕ ರಕ್ಷಣಾ ಸಂಹಿತೆ (BNSS) ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ (BSA) ಸಾಮಾನ್ಯ ಜನರ ಹಕ್ಕುಗಳನ್ನು ಮೊಟಕುಗೊಳಿಸುತ್ತವೆ ಮತ್ತು ಪೊಲೀಸರಿಗೆ ಯಾರ ವಿರುದ್ಧವಾಗಲಿ ಕ್ರಮಕೈಗೊಳ್ಳಲು ವ್ಯಾಪಕ ಅಧಿಕಾರವನ್ನು ನೀಡುತ್ತದೆ ಎಂದರು.
'ಈ ಹೊಸ (ಕ್ರಿಮಿನಲ್) ಕಾನೂನುಗಳನ್ನು ಈಗ ಹಿಂದೆಂದಿಗಿಂತಲೂ ಹೆಚ್ಚಾಗಿ ಬಡವರು, ದುರ್ಬಲ ವರ್ಗಗಳು, ಮುಸ್ಲಿಮರು, ಬುಡಕಟ್ಟುಗಳು ಮತ್ತು ದಲಿತರ ವಿರುದ್ಧ ಬಳಸಲಾಗುವುದು' ಎಂದು ಹೈದರಾಬಾದ್ ಸಂಸದ ಓವೈಸಿ ಹೇಳಿದ್ದಾರೆ.
ಪೊಲೀಸರು ಯಾವುದೇ ತಪ್ಪು ಮಾಡಿದರೆ ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುವುದು ಎಂಬ ಬಗ್ಗೆ (ಹೊಸ ಕಾನೂನುಗಳಲ್ಲಿ) ಯಾವುದೇ ಉಲ್ಲೇಖವಿಲ್ಲ. 'ಹೊಸ ಕಾನೂನುಗಳು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಗಿಂತ ಹೆಚ್ಚು ಅಪಾಯಕಾರಿ' ಎಂದು ಹೇಳಿದರು.