ಕೋಝಿಕೋಡ್: ಕೇರಳದಲ್ಲಿ ಅಪರೂಪದ ಅಮೀಬಾ ಸೋಂಕಿನ (ಅಮೀಬಿಕ್ ಮೆನಿಂಗೂ ಎನ್ಸೆಫಾಲಿಟಿಸ್) 4ನೇ ಪ್ರಕರಣ ಪತ್ತೆಯಾಗಿದೆ.
ಕಳೆದ ಮೇ ತಿಂಗಳಿಂದ ರಾಜ್ಯದಲ್ಲಿ ಪತ್ತೆಯಾದ ನಾಲ್ಕನೇ ಪ್ರಕರಣ ಇದಾಗಿದೆ. ಸೋಂಕು ಬಾಧಿತರೆಲ್ಲ ಮಕ್ಕಳಾಗಿದ್ದು, ಈ ಪೈಕಿ ಮೂವರು ಮೃತಪಟ್ಟಿದ್ದಾರೆ.
5 ವರ್ಷದ ಬಾಲಕಿಯೊಬ್ಬಳು ಕೋಝಿಕೋಡ್‌ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಬಾಲಕಿಯಲ್ಲಿ ಅಮೀಬಿಕ್ ಮೆನಿಂಗೂ ಎನ್ಸೆಫಾಲಿಟಿಸ್ ಲಕ್ಷಣಗಳು ಕಂಡು ಬಂದಿದೆ ಎಂದು ತಿಳಿದುಬಂದಿದೆ. ಬಾಲಕಿ ಈಜುಕೊಳಕ್ಕೆ ಹೋಗಿದ್ದು ಈ ವೇಳೆ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ.
ಏತನ್ಮಧ್ಯೆ, ಸೋಂಕ ತಡೆಗಟ್ಟುವ ಸಂಬಂಧ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಶುಕ್ರವಾರ ಉನ್ನತ ಮಟ್ಟದ ಸಭೆ ನಡೆದಿದ್ದು, ಸೋಂಕು ಹರಡದಂತೆ ತಡೆಯಲು ಹಾಗೂ ಕಲುಷಿತ ನೀರಿನಲ್ಲಿ ಸ್ನಾನ ಮಾಡದಂತೆ ಸೂಚನೆ ನೀಡಿದ್ದಾರೆ.
ತೀವ್ರ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿರುವ ಅವರು ಜಲಮೂಲಗಳನ್ನು ಸ್ವಚ್ಛವಾಗಿಡಲು ಎಲ್ಲರೂ ಕಾಳಜಿ ವಹಿಸಬೇಕು ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಆರೋಗ್ಯ ಸಚಿವೆ ವೀಣಾ ಜಾರ್ಜ್, ಮುಖ್ಯ ಕಾರ್ಯದರ್ಶಿ ವೇಣು ವಿ, ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜನ್ ಎನ್ ಖೋಬ್ರಗಡೆ ಮತ್ತು ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ವೈರಾಲಜಿ ನಿರ್ದೇಶಕ ಡಾ ಇ ಶ್ರೀಕುಮಾರ್ ಸಭೆಯಲ್ಲಿ ಭಾಗವಹಿಸಿದ್ದರು.
ಕೋಯಿಕ್ಕೋಡ್ ಜಿಲ್ಲೆಯಲ್ಲೇ ಬುಧವಾರದಂದು ಅಮೀಬಾ ಸೋಂಕು ಬಾಧಿತ 14 ವರ್ಷದ ಬಾಲಕ ಮೃತಪಟ್ಟಿದ್ದನು. ಇದಕ್ಕೂ ಮೊದಲು ಮೇ 21ರಂದು ಮಲಪ್ಪುರಂ ಜಿಲ್ಲೆಯಲ್ಲಿ 5 ವರ್ಷದ ಬಾಲಕಿ ಮತ್ತು ಜೂನ್ 25ರಂದು ಕಣ್ಣೂರು ಜಿಲ್ಲೆಯಲ್ಲಿ 13 ವರ್ಷದ ಬಾಲಕಿ ಮೃತಪಟ್ಟಿದ್ದರು.
ಈ ಹಿಂದೆ 2023 ಮತ್ತು 2017ರಲ್ಲಿ ಆಲಪ್ಪುಳ ಜಿಲ್ಲೆಯಲ್ಲಿ ಅಮೀಬಾ ಸೋಂಕಿನ ಪ್ರಕರಣ ವರದಿಯಾಗಿತ್ತು.
ಪರಾವಲಂಬಿಯಲ್ಲದ, ಏಕಕೋಶ ಜೀವಿ ಅಮೀಬಾ ಬ್ಯಾಕ್ಟೀರಿಯಾ, ಕಲುಷಿತ ನೀರಿನಿಂದ ಮೂಗಿನ ಮೂಲಕ ದೇಹವನ್ನು ಪ್ರವೇಶಿಸಿದಾಗ ಸೋಂಕು ಹರಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.