ಸೂರತ್: ಗುಜರಾತ್ ನ ಸೂರತ್ ನಲ್ಲಿ ಭೀಕರ ಕಟ್ಟಡ ಕುಸಿತ ಉಂಟಾಗಿದ್ದು, ಘಟನೆಯಲ್ಲಿ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಸೂರತ್ ನಲ್ಲಿ ಸಚಿನ್ ಪಾಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸುಮಾರು 6 ಅಂತಸ್ತಿನ ಅಪಾರ್ಟ್ ಮೆಂಟ್ ಕುಸಿದಿದೆ. ಶನಿವಾರ ತಡರಾತ್ರಿ ಈ ದುರಂತ ಸಂಭವಿಸಿದ್ದು ರಾತ್ರಿ ಕಟ್ಟಡದಲ್ಲಿ ಮಲಗಿದ್ದ ಹಲವರು ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ.
ವಿಚಾರ ತಿಳಿಯುತ್ತಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ಎಸ್ ಡಿ ಆರ್ ಎಫ್ ತಂಡ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಈ ವರೆಗೂ 7 ಮೃತ ದೇಹಗಳನ್ನು ಹೊರ ತಂದಿದ್ದಾರೆ. ಅವಶೇಷಗಳಡಿಯಲ್ಲಿ ಇನ್ನೂ 6 ರಿಂದ 7 ಮಂದಿ ಸಿಲುಕಿರುವ ಸಾಧ್ಯತೆ ಇದೆ. ಅಂತೆಯೇ 15 ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಲಾಗಿದೆ.
2017 ರಲ್ಲಿ ನಿರ್ಮಿಸಲಾಗಿದ್ದ ಈ ಅಪಾರ್ಟ್ ಮೆಂಟ್ ನಲ್ಲಿ ಐದು ಐದು ಕುಟುಂಬಗಳು ವಾಸಿಸುತ್ತಿದ್ದವು. ಪೊಲೀಸರ ಪ್ರಕಾರ, ಕುಸಿತ ಸಂಭವಿಸಿದಾಗ ಹಲವಾರು ನಿವಾಸಿಗಳು ಕೆಲಸದಲ್ಲಿದ್ದರು. ಆದರೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಅನೇಕರು ಒಳಗೆ ಮಲಗಿದ್ದರು. ಕಟ್ಟಡವು ಕೇವಲ ಎಂಟು ವರ್ಷಗಳಷ್ಟು ಹಳೆಯದಾಗಿದ್ದರೂ, ಹೆಚ್ಚಿನ ಫ್ಲ್ಯಾಟ್‌ಗಳು ಖಾಲಿ ಮತ್ತು ಶಿಥಿಲಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಸುಮಾರು ಐದು ಫ್ಲಾಟ್‌ಗಳಲ್ಲಿ ಈ ಪ್ರದೇಶದಲ್ಲಿ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರು ವಾಸಿಸುತ್ತಿದ್ದರು ಎನ್ನಲಾಗಿದೆ. ಅವಶೇಷಗಳ ಒಳಗಿನಿಂದ ಅವರ ಧ್ವನಿ ನಮಗೆ ಕೇಳಿಸುತ್ತದೆ, ಶೀಘ್ರದಲ್ಲೇ ಅವರನ್ನು ರಕ್ಷಿಸಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.