ನವದೆಹಲಿ: ನೀಟ್-ಯುಜಿ ಪೇಪರ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಗುರುವಾರ ಪಾಟ್ನಾದ ಏಮ್ಸ್‌ನ ನಾಲ್ವರು ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಂಬಿಬಿಎಸ್ ಮೂರನೇ ವರ್ಷದ ಮೂವರು ವಿದ್ಯಾರ್ಥಿಗಳು - ಚಂದನ್ ಸಿಂಗ್, ರಾಹುಲ್ ಅನಂತ್ ಮತ್ತು ಕುಮಾರ್ ಶಾನು ಹಾಗೂ ಎರಡನೇ ವರ್ಷದ ವಿದ್ಯಾರ್ಥಿ - ಕರಣ್ ಜೈನ್ ಅವರನ್ನು ತೀವ್ರ ವಿಚಾರಣೆಯ ನಂತರ ಸಿಬಿಐ ಬಂಧಿಸಿದೆ ಎಂದು ಅವರು ಹೇಳಿದ್ದಾರೆ.
ಏಮ್ಸ್‌ನ ಹಿರಿಯ ಅಧ್ಯಾಪಕರ ಸಮ್ಮುಖದಲ್ಲಿ ವಿದ್ಯಾರ್ಥಿಗಳನ್ನು ಬುಧವಾರ ಹಾಸ್ಟೆಲ್ ಕೊಠಡಿಗಳಿಂದ ಕರೆದೊಯ್ಯಲಾಗಿತ್ತು ಮತ್ತು ತನಿಖೆಗೆ ಒಳಪಡಿಸುವ ಬಗ್ಗೆ ವಿದ್ಯಾರ್ಥಿಗಳಿಗೆ ಮುಂಚಿತವಾಗಿ ತಿಳಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಬಿಐ ವಿದ್ಯಾರ್ಥಿಗಳ ಹಾಸ್ಟೆಲ್ ಕೊಠಡಿಗಳನ್ನು ಸೀಲ್ ಮಾಡಿದೆ. ಸಿಬಿಐ ನಾಲ್ವರು ವಿದ್ಯಾರ್ಥಿಗಳನ್ನು ಕರೆದೊಯ್ದಿದೆ ಎಂದು ಏಮ್ಸ್ ಪಾಟ್ನಾ ನಿರ್ದೇಶಕ ಜಿ ಕೆ ಪಾಲ್ ಅವರು ಹೇಳಿದ್ದಾರೆ.
ಡೀನ್, ಹಾಸ್ಟೆಲ್ ವಾರ್ಡನ್ ಮತ್ತು ಒಎಸ್‌ಡಿ ಅವರ ಸಮ್ಮುಖದಲ್ಲಿ ಸಿಬಿಐ ಅಧಿಕಾರಿಗಳ ತಂಡ ವಿದ್ಯಾರ್ಥಿಗಳನ್ನು ಕರೆದೊಯ್ದಿದೆ ಎಂದು ನಿರ್ದೇಶಕ ಪಾಲ್ ತಿಳಿಸಿದ್ದಾರೆ.