ತಿರುವರೂರು: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅನಿವಾಸಿ ಭಾರತೀಯ ಮಹಿಳೆ ಕಮಲಾ ಹ್ಯಾರಿಸ್ ಅವರು ಗೆಲುವು ಸಾಧಿಸಲಿ ಎಂದು ಅವರ ಕುಟುಂಬವರ್ಗದವರು ತಮಿಳುನಾಡಿನ ತಿರುವರೂರು ಜಿಲ್ಲೆಯ ತುಳಸೇಂದ್ರಪುರಂನ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಜೋ-ಬೈಡನ್ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದ ನಂತರ ಅವರು, ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಅವರನ್ನು ಅನುಮೋದಿಸಿದ್ದಾರೆ.
ಅಮೆರಿಕ ಚುನಾವಣೆಗೆ ಕಮಲಾ ಹ್ಯಾರಿಸ್ ಅವರ ಹೆಸರನ್ನು ಅಧ್ಯಕ್ಷೀಯ ಅಭ್ಯರ್ಥಿಯಾಗಿ ಘೋಷಿಸಿದ ನಂತರ ತುಳಸೇಂದ್ರಪುರಂ ಮತ್ತೆ ಪುಳಕಿತಗೊಂಡಿದೆ. ಗ್ರಾಮದ ಧರ್ಮಶಾಸ್ತಾ ದೇವಾಲಯ ವಿಶಿಷ್ಟವಾದ ಗೋಡೆಯನ್ನು ಹೊಂದಿದ್ದು, ಕೊಡುಗೆ ನೀಡಿದ ಜನರ ಹೆಸರನ್ನು ತಮಿಳು ಭಾಷೆಯಲ್ಲಿ ಕೆತ್ತಲಾಗಿದೆ. ಇದರಲ್ಲಿ 2025 ರ ಯುಎಸ್ ಚುನಾವಣೆಗೆ ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಹ್ಯಾರಿಸ್ ಕೂಡ ಒಬ್ಬರಾಗಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಗ್ರಾಮಸ್ಥರು, ಕಮಲಾ ಹ್ಯಾರಿಸ್ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಗಾಗಿ ಪ್ರಾರ್ಥಿಸುತ್ತಿರುವುದಾಗಿ ತಿಳಿಸಿದರು.
ಎಎನ್ ಐ ಸುದ್ದಿಸಂಸ್ಥೆ ಜೊತೆಗೆ ಮಾತನಾಡಿದ ಮಹಿಳೆಯೊಬ್ಬರು, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ನಾಮನಿರ್ದೇಶನಗೊಂಡಿರುವುದಕ್ಕೆ ತುಂಬಾ ಸಂತೋಷವಾಗಿದೆ ಮತ್ತು ನಾವು ಜೋ ಬೈಡನ್ ಮತ್ತು ಕಮಲಾ ಹ್ಯಾರಿಸ್ ಅವರನ್ನು ಬೆಂಬಲಿಸುತ್ತೇವೆ. ಅವರು ಚುನಾವಣೆಯಲ್ಲಿ ಗೆದ್ದು ಬರಲಿ ಎಂದು ಶುಭ ಹಾರೈಸುತ್ತೇವೆ ಎಂದರು.